ಭಟ್ಕಳ: ಪೋಕ್ಸೋ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ಹೆಸರನ್ನು ದುರುದ್ದೇಶಪೂರ್ವಕವಾಗಿ ಬಹಿರಂಗಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕನ ತಾಯಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ.
ನಗರದ ವೈದ್ಯ ಡಾ.ಶೈಲೇಶ ದೇವಾಡಿಗ ಎನ್ನುವವರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಕುರಿತು ನಗರ ಪೊಲೀಸ್ ಠಾಣೆಗೆ ಈತ್ತೀಚಿಗೆ ದೂರು ದಾಖಲಾಗಿತ್ತು. ಸದ್ಯ ಈ ಪ್ರಕರಣ ಕಾರವಾರದ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ನೊಂದ ಬಾಲಕನ ಹೆಸರನ್ನು ಗೌಪ್ಯವಾಗಿಡಬೇಕು ಎಂದು ಕಾನೂನು ಹೇಳುತ್ತದೆ ಹಾಗೂ ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಆದರೆ ಈ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ಬಾಲಕನಿಗೆ ಮಾನಸಿಕ ವೇದನೆ ನೀಡಲು ಹಾಗೂ ಆತನ ಶಿಕ್ಷಣಕ್ಕೆ ಹಿನ್ನಡೆಯಾಗುವಂತೆ ಕೆಲವರು ಬಾಲಕ ಹಾಗೂ ದೂರು ಸಲ್ಲಿಸಿದವರ ಹೆಸರನ್ನು ಬಹಿರಂಗಪಡಿಸಿದ್ದಾರೆ’ ಎಂದು ಗ್ರಹ ಸಚಿವರಿಗೆ ಮನವಿ ನೀಡಲಾಗಿದೆ.
ಇತ್ತೀಚಿಗೆ ತಹಶೀಲ್ದಾರ್ ಅವರಿಗೆ ಕೆಲವರು ದೂರುದಾರರ ವಿರುದ್ಧ ಮನವಿಯೊಂದನ್ನು ಸಲ್ಲಿಸಿದ್ದು, ಮನವಿ ಸಲ್ಲಿಕೆಯ ವೇಳೆ ಸಂತ್ರಸ್ತ ಬಾಲಕನ ಕುಟುಂಬದವರು ಹಾಗೂ ಬಾಲಕನ ಹೆಸರನ್ನು ಬಹಿರಂಗವಾಗಿ ಹೇಳಿದ್ದಾರೆ. ಆ ಮೂಲಕ ಪೋಕ್ಸೋ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ’ ಎಂದು ಸಂತ್ರಸ್ತ ಬಾಲಕನ ತಾಯಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಗ್ರಹಸಚಿವರಿಗೆ ಆಗ್ರಹಿಸಿದ್ದಾರೆ.