ನವದೆಹಲಿ: ಇಸ್ರೋ 2018 ರಿಂದ ಈವರೆಗೆ 19 ದೇಶಗಳ 177 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ಸುಮಾರು 1,100 ಕೋಟಿ ರೂ.ಗಳನ್ನು ಗಳಿಸಿದೆ. ಈ ವಿಚಾರವಾಗಿ ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಕೊಲಂಬಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಜಪಾನ್, ಲಿಥುವೇನಿಯಾ, ಲುಕ್ಸೆಂಬರ್ಗ್, ಮಲೇಷ್ಯಾ, ನೆದರ್ಲೆಂಡ್ಸ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ಸ್ಪೇನ್, ಸ್ವಿಜರ್ಲೆಂಡ್, ಯುನೈಟೆಡ್ ಕಿಂಗ್ಡಂ ಹಾಗೂ ಅಮೆರಿಕದ ಉಪಗ್ರಹಗಳನ್ನು ಉಡಾವಣೆ ಮಾಡಿದೆ.
ವಿದೇಶಗಳೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದ ಅನ್ವಯ ಆ ದೇಶಗಳ ಉಪಗ್ರಹಗಳನ್ನು ಪಿಎಸ್ಎಲ್ವಿ ಹಾಗೂ ಜಿಎಸ್ಎಲ್ವಿ-ಎಂಕೆ III ಮೂಲಕ ಉಡಾವಣೆ ಮಾಡಿತ್ತು. 2018 ರಿಂದ ಇಲ್ಲಿಯವರೆಗೆ ಇಸ್ರೋ 177 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ವಿದೇಶಿ ವಿನಿಯಮದ ಮೂಲಕ 94 ದಶಲಕ್ಷ ಅಮೆರಿಕನ್ ಡಾಲರ್ ಮತ್ತು 46 ದಶಲಕ್ಷ ಯುರೋ ಗಳಿಸಿದೆ.
ಕೇಂದ್ರ ಸರ್ಕಾರವು 2020 ರ ಜೂನ್ನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದೂರದೃಷ್ಟಿಯಿಂದ ಕೂಡಿದ ಅನೇಕ ಸುಧಾರಣೆಗಳಿಗೆ ಕ್ರಮ ಕೈಗೊಂಡಿತ್ತು. ಸರ್ಕಾರೇತರ ಸಂಸ್ಥೆಗಳೂ ವಾಣಿಜ್ಯ ಉದ್ದೇಶದೊಂದಿಗೆ ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.



