ಯಲ್ಲಾಪುರ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ನೆನೆಗುದಿಗೆ ಬೀಳಲು ಡೋಂಗಿ ಪರಿಸರವಾದಿಗಳೇ ಕಾರಣ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ್ ಆರೋಪಿಸಿದ್ದಾರೆ. ಅವರು ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರಬಲ ಇಚ್ಛಾಶಕ್ತಿ ತೋರಿ ಯೋಜನೆ ಅನುಷ್ಠಾನಕ್ಕೆ ತರಲು ಕಾರ್ಯಪ್ರವೃತ್ತರಾಗಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಕರಾವಳಿಯ ಎಲ್ಲ ತಾಲೂಕುಗಳೂ ರೈಲ್ವೆ ಸೌಲಭ್ಯ ಹೊಂದಿದೆ. ಘಟ್ಟದ ಮೇಲಿನ ಶಿರಸಿ-ಸಿದ್ದಾಪುರ ತಾಳಗುಪ್ಪಾ ಯೋಜನೆಯಿಂದ ರೈಲ್ವೆ ಸೌಲಭ್ಯ ಪಡೆಯಲಿದೆ. ಮುಂದೊಂದು ದಿನ ಯಲ್ಲಾಪುರ ಮಾತ್ರ ರೈಲು ಸೌಲಭ್ಯದಿಂದ ವಂಚಿತವಾಗುವ ಅಪಾಯ ಇದೆ. ಈ ಯೋಜನೆ ಕಾರ್ಯಗತವಾದರೆ, ಯಲ್ಲಾಪುರಕ್ಕೆ ಕರಾವಳಿ, ಬಯಲುಸೀಮೆ ಸಂಪರ್ಕ ಸಾಧ್ಯವಾಗುತ್ತದೆ ಎಂದರು.
ಉಳಿದೆಲ್ಲ ಕಡೆ ರೈಲು ಅಥವಾ ಚತುಷ್ಪಥ ಯೋಜನೆಗೆ ಪರಿಸರ ಅಡ್ಡಿ ಬರುವುದಿಲ್ಲ. ಕೇವಲ ಯಲ್ಲಾಪುರ ಭಾಗದಲ್ಲಿ ರೈಲು ಯೋಜನೆ ಆಗುತ್ತದೆ ಎಂದಾದರೆ ನಿದ್ದೆಯಲ್ಲಿದ್ದ ಡೊಂಗಿ ಪರಿಸರವಾದಿಗಳು ಮೈಕೊಡವಿ ನಿಲ್ಲುತ್ತಾರೆ. ಪದೆ ಪದೆ ನ್ಯಾಯಾಲಯದಲ್ಲಿ ತಡೆ ತಂದು ವಿಘ್ನಸಂತೋಷ ಅನುಭವಿಸುತ್ತಿದ್ದಾರೆ. ಉಳಿದ ಕಡೆ ಇಂತಹ ಯೋಜನೆಗಳಿಂದ ಪರಿಸರ ಹಾನಿ ಆಗುವುದಿಲ್ಲವೇ.? ಎಂದು ಪ್ರಶ್ನಿಸಿದರು.
ಈ ವೇಳೆ ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಮಾಧವ ನಾಯಕ, ಸಂತೋಷ ನಾಯ್ಕ, ವಿನೋದ ತಳೆಕರ ಹಾಜರಿದ್ದರು.