ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಯೋಧರ ನಡುವೆ ಮತ್ತೆ ಸಂಘರ್ಷ.! 3 ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವರ ಸಭೆ.!

ಅರುಣಾಚಲ ಪ್ರದೇಶ: ರಾಜ್ಯದ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಯೋಧರ ನಡುವೆ ಮತ್ತೆ ಘರ್ಷಣೆಯಾಗಿದ್ದು, ಘಟನೆಯಲ್ಲಿ ಎರಡೂ ದೇಶಗಳ 30 ಕ್ಕೂ ಹೆಚ್ಚು ಸೇನಾ ಯೋಧರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆ ದೃಢಪಡಿಸಿದೆ.

ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿ ಭಾಗ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿಸೆಂಬರ್​ 9 ರಂದು ಶುಕ್ರವಾರ ತಡರಾತ್ರಿ ಚೀನಾ ಹಾಗೂ ಭಾರತೀಯ ಸೇನಾ ಯೋಧರ ನಡುವೆ ಸಂಘರ್ಷ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಗಲಾಟೆ ನಡೆದ ಬಳಿಕ ಉಭಯ ದೇಶದ ಸೇನಾಧಿಕಾರಿಗಳು ಫ್ಲ್ಯಾಗ್ ಮೀಟಿಂಗ್ ನಡೆಸಿ ಶಾಂತಿ ಕಾಪಾಡಲು ತೀರ್ಮಾನಿಸಿದ್ದಾರೆ.

ನಿತ್ಯ ನಡೆಯುವ ಗಸ್ತು ವೇಳೆ ಚೀನಾ ಸೇನೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿರುವ ಭಾರತದ ಗಡಿ ಪ್ರವೇಶಿಸಿದೆ. ಇದಕ್ಕೆ ಭಾರತೀಯ ಸೇನಾಪಡೆ ತೀವ್ರ ಆಕ್ಷೇಪಿಸಿದೆ. ಈ ವೇಳೆ ಭಾರತ, ಚೀನಾ ಸೇನಾ ಯೋಧರ ನಡುವೆ ತಳ್ಳಾಟ, ನೂಕಾಟ ನಡೆದಿದ್ದು, ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಬಳಿಕ ಭಾರತೀಯ ಯೋಧರು ತಕ್ಕ ತಿರುಗೇಟು ಕೊಟ್ಟಿದ್ದರಿಂದ ಚೀನಾ ಸೇನೆ ಗಡಿಯಿಂದ ಹಿನ್ನಡೆದಿದೆ. ಈ ಮೂಲಕ ಭಾರತ ಸೇನೆ, ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.

3 ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವರ ಸಭೆ.!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರನ್ನು ಸೇನೆಯ ಮೂರು ಪಡೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಘರ್ಷಣೆಯ ಕುರಿತು ಮಹತ್ವದ ಸಭೆಯನ್ನು ಮಾಡಲಿದ್ದಾರೆ.