ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ದೀಪಂಕರ್‌ ದತ್ತಾ ಪ್ರಮಾಣವಚನ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ದೀಪಂಕರ್‌ ದತ್ತಾ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಬೆಳಿಗ್ಗೆ 10.36ಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ಅವರು ಕೋರ್ಟ್‌ ರೂಂ. 1 ರಲ್ಲಿ ಪ್ರಮಾಣ ವಚನ ಬೋಧಿಸಿದರು.

ನ್ಯಾಯಮೂರ್ತಿ ದತ್ತಾ ಪ್ರಮಾಣ ವಚನ ಸ್ವೀಕಾರದೊಂದಿಗೆ, ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 28 ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ 34 ಸದಸ್ಯ ಬಲವನ್ನು ಸುಪ್ರೀಂ ಕೋರ್ಟ್ ಹೊಂದಿದೆ.

ಭಾನುವಾರ ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು ಅವರ ನೇಮಕವನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ನ್ಯಾಯಮೂರ್ತಿ ದತ್ತಾ ಅವರು 2030 ರ ಫೆಬ್ರವರಿ 8 ರವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ದೀಪಂಕರ್‌ ದತ್ತಾ ಹೆಸರನ್ನು ಶಿಫಾರಸು ಮಾಡಿತ್ತು.

2006ರ ಜೂನ್ 22ರಂದು ನ್ಯಾಯಮೂರ್ತಿ ದತ್ತಾ ಅವರನ್ನು ಕಲ್ಕತ್ತಾ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಉನ್ನತೀಕರಿಸಲಾಗಿತ್ತು. ಅವರು 2020 ರ ಏಪ್ರಿಲ್‌ 28 ರಂದು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.