ಭಾರತ-ಆಸ್ಟ್ರೇಲಿಯಾ 2 ನೇ ಟಿ20 ಪಂದ್ಯ: ಟೈ ಆಗಿ ಸೂಪರ್ ಓವರ್ ನಲ್ಲಿ ಭರ್ಜರಿ ಗೆಲುವು ಕಂಡ ಭಾರತದ ವನಿತೆಯರು.!

ಮುಂಬೈ: ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಣ 2 ನೇ ಟಿ20 ಪಂದ್ಯವು ಟೈ ಆಗಿ ಸೂಪರ್ ಓವರ್ ನಲ್ಲಿ ಭಾರತ ತಂಡದ ಗೆಲುವಿನೊಂದಿಗೆ ಮುಕ್ತಾಯವಾಯಿತು.

ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಸೋತ ಪರಿಣಾಮ ದ್ವಿತೀಯ ಪಂದ್ಯ ಮಹತ್ವದ್ದಾಗಿತ್ತು. ಅದರಂತೆ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಕೌರ್ ಪಡೆ ಹೋರಾಟ ನಡೆಸಿತು. ಕೊನೆಯಲ್ಲಿ ಪಂದ್ಯ ಟೈ ಆದ ಪರಿಣಾಮ ಸೂಪರ್ ಓವರ್ ನಲ್ಲಿ ಭಾರತ ಗೆಲುವು ಸಾಧಿಸಿ, ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಮುನ್ನಡೆಯಲ್ಲಿದೆ. ಸ್ಮೃತಿ ಮಂದಾನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ 16 ಪಂದ್ಯಗಳನ್ನು ಗೆದ್ದು ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಆಸ್ಟ್ರೇಲಿಯಾಗೆ ಸೋಲಿನ ಶಾಕ್ ನೀಡುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ. 

ಭಾರತ ತಂಡವು ಆಸ್ಟ್ರೇಲಿಯಾ ನಡುವಿನ್ 2 ನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಿಂದ ಕಣಕ್ಕಿಳಿದಿತ್ತು. ಯಾಕೆಂದರೆ ಮೊದಲ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ, ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕಣಕ್ಕಿಳಿದಿತ್ತು. ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 76 ರನ್‌ಗಳ ಜೊತೆಯಾಟದ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು.

ಶಫಾಲಿ ವರ್ಮಾ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 21 ರನ್ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧನಾ ಕೇವಲ 49 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 79 ರನ್ ಬಾರಿಸುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು.

ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅಜೇಯ 26 ಹಾಗೂ ದೇವಿಕಾ ವೈದ್ಯ ಸಮಯೋಚಿತ 11 ರನ್ ಸಿಡಿಸುವ ಮೂಲಕ ಪಂದ್ಯ ಟೈ ಆಗುವಂತೆ ಮಾಡಿದರು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.

ರೋಚಕವಾದ ಸೂಪರ್ ಓವರ್.!

ಸೂಪರ್ ಓವರ್​ನಲ್ಲಿ ಮೊದಲು ಭಾರತ ಬ್ಯಾಟಿಂಗ್ ಮಾಡಿತು. ಸ್ಮೃತಿ ಮಂದಾನ ಮತ್ತು ರಿಚ್ಚಾ ಘೋಷ್ ಕಣಕ್ಕಿಳಿದರು. ಹೇದರ್ ಗ್ರಹಮ್ ಅವರ ಮೊದಲ ಎಸೆತದಲ್ಲೇ ಘೋಷ್ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು. ಆದರೆ, ಎರಡನೇ ಎಸೆತದಲ್ಲಿ ಔಟಾದರು. ಮೂರನೇ ಎಸೆತದಲ್ಲಿ ಕೌರ್ 1 ರನ್ ಗಳಿಸಿದರೆ, 4ನೇ ಎಸೆತದಲ್ಲಿ ಮಂದಾನ ಫೋರ್, 5ನೇ ಎಸೆತದಲ್ಲಿ ಸಿಕ್ಸ್ ಹಾಗೂ 6ನೇ ಎಸೆತದಲ್ಲಿ 3 ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಸೂಪರ್ ಓವರ್​ನಲ್ಲಿ ಗೆಲ್ಲಲು ಭಾರತ 21 ರನ್​ಗಳ ಟಾರ್ಗೆಟ್ ನೀಡಿತು.

ಇನ್ನು ಸೂಪರ್ ಓವರ್‌ ಗೆಲ್ಲಲು ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಅಲಿಸಾ ಹೀಲಿ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇನ್ನು ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಗಾರ್ಡ್ನರ್‌, ರಾಧಾ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು 4ನೇ ಎಸೆತದಲ್ಲಿ ತಾಹಿಲಾ ಮೆಗ್ರಾಥ್ ಒಂದು ರನ್ ಗಳಿಸಿದರು. ಇನ್ನು ಕೊನೆಯ ಎರಡು ಎಸೆತಗಳಲ್ಲಿ ಹೀಲಿ ಕ್ರಮವಾಗಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.