ದೆಹಲಿಯಲ್ಲಿ ಹೆಚ್ಚಾದ ವಾಯುಮಾಲಿನ್ಯ: ಶಾಲೆಗಳಿಗೆ ರಜೆ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು ಪ್ರಾಥಮಿಕ ಶಾಲಾ ಮಕ್ಕಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ. ಮಾಲಿನ್ಯ ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಘೋಷಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಕೇಜ್ರಿವಾಲ್​, ಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾಳೆಯಿಂದ ದೆಹಲಿಯಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿದ್ದೇವೆ. 5 ನೇ ತರಗತಿ ಮೇಲ್ಪಟ್ಟ ಎಲ್ಲ ತರಗತಿಗಳಿಗೂ ಹೊರಾಂಗಣ ಚಟುವಟಿಕೆಗಳನ್ನು ನಿಲ್ಲಿಸಿದ್ದೇವೆ ಎಂದರು.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಕಳೆದ ಕೆಲವು ದಿನಗಳಿಂದ ತೀವ್ರ ವಿಭಾಗದಲ್ಲಿದೆ. ಹುಲ್ಲು ಸುಡುವ ಪ್ರದೇಶಗಳಿಂದ ದೆಹಲಿಯ ಕಡೆಗೆ ಬೀಸುವ ಬಲವಾದ ಗಾಳಿಯಿಂದಾಗಿ (700-1000 ಮೀ) ಗುಣಮಟ್ಟವು ಗಮನಾರ್ಹವಾಗಿ ಹದಗೆಟ್ಟಿದೆ ಎಂದು ಡೇಟಾ ತೋರಿಸಿದೆ. ಈ ಹಿನ್ನೆಲೆ BS-VI ಕಂಪ್ಲೈಂಟ್ ಇಲ್ಲದ ಡೀಸೆಲ್ ನಾಲ್ಕು-ಚಕ್ರಗಳ ವಾಹನಗಳ ಬಳಕೆಯನ್ನು ಮತ್ತು ಟ್ರಕ್‍ಗಳ ಪ್ರವೇಶವನ್ನು ನಿಷೇಧಿಸಿದೆ.