ಗುಜರಾತ್ ಸಿಎಂ ಅಭ್ಯರ್ಥಿ ಘೋಷಿಸಿದ ಆಪ್: ಟಿವಿ ಜರ್ನಲಿಸ್ಟ್ ಮುಖ್ಯಮಂತ್ರಿ ಅಭ್ಯರ್ಥಿ

ಗುಜರಾತ್: ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಎಲ್ಲ ಪಕ್ಷಗಳೂ ಅಖಾಡಕ್ಕಿಳಿದು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಆಮ್ ಆದ್ಮಿ ಪಕ್ಷ ಈ ಬಾರಿ ಅಖಾಡದಲ್ಲಿದ್ದು ಕಾಂಗ್ರೇಸ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ. ಇನ್ನು ಎಎಪಿ ಶುಕ್ರವಾರ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು, ಆಪ್ ಅಧಿಕಾರಕ್ಕೆ ಬಂದರೆ ಮಾಜಿ ಪತ್ರಕರ್ತ ಈಸುದನ್ ಗಧ್ವಿ ಅವರು ಗುಜರಾತ್ ಸಿಎಂ ಆಗಲಿದ್ದಾರೆ ಎಂದು ಹೇಳಿದೆ.

ಈಸುದನ್ ಗಧ್ವಿ ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇವರು ಮಾಜಿ ಟಿವಿ ಪತ್ರಕರ್ತರಾಗಿದ್ದು 2021 ರಲ್ಲಿ ಎಎಪಿಗೆ ಸೇರಿದ್ದರು. ಗಾಢ್ವಿ ಅವರು ಆರಂಭದಲ್ಲಿ ದೂರದರ್ಶನದಲ್ಲಿ ಕೆಲಸ ಮಾಡಿದ್ದರು. ನಂತರ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಟಿವಿ ಪತ್ರಕರ್ತರೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್‌ 1 ಹಾಗೂ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಎಎಪಿ ಈವರೆಗೆ 118 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಉಳಿದ ಕ್ಷೇತ್ರಗಳಿಗೆ ಇನ್ನಷ್ಟೇ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. ಡಿಸೆಂಬರ್ 1 ರಂದು ಚುನಾವಣೆ ನಡೆಯಲಿದೆ. ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.