ಬೆಂಗಳೂರು: ಇನ್ಸ್ಪೆಕ್ಟರ್ ಹುದ್ದೆಗೆ 70-80 ಲಕ್ಷ ಲಂಚ ಕೊಡಬೇಕು ಎಂಬ ಹೇಳಿಕೆ ಬಗ್ಗೆ ಸ್ವತಃ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸಂಬಂಧ ಕೆಆರ್ ಪುರದಲ್ಲಿ ಮಾತನಾಡಿದ ಅವರು, ನಂದೀಶ್ ಸಾವಿನ ಬಳಿಕ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋಗಿದ್ದೆ. ನಂದೀಶ್ ಸಾವಿನಿಂದ ನನ್ನ ಮನಸ್ಸಿಗೆ ಬಹಳ ನೋವಾಗಿತ್ತು. ಹೀಗಾಗಿ ಅವರ ಪತ್ನಿ, ಮಕ್ಕಳು ಮತ್ತು ತಂದೆ-ತಾಯಿಗೆ ಧೈರ್ಯ ತುಂಬಲು ಹೋಗಿದ್ದೆ.
ಆಗ ಮಾರ್ಗದಲ್ಲಿ ಕಾರ್ಯಕರ್ತರು ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದೆ. ಇನ್ಸ್ಪೆಕ್ಟರ್ ಹುದ್ದೆಗೆ 70 ಲಕ್ಷ, 80 ಲಕ್ಷ ಖರ್ಚು ಮಾಡಿಬಿಟ್ಟಿದ್ದಾನೆ. ಅಮಾನತಾದ ಬಳಿಕ ಆ ದುಡ್ಡು ಹೇಗಪ್ಪ ವಾಪಸ್ ತೆಗೆದುಕೊಳ್ಳಬೇಕು ಅನ್ನೋ ಟೆನ್ಶನ್ ನಂದೀಶ್‍ಗೆ ಇತ್ತು. ಹೀಗಾಗಿ ಆತ ಹೃದಯಾಘಾತದಿಂದ ಸಾವನ್ನಪ್ಪಿರಬೇಕು ಅಂತಾ ಕಾರ್ಯಕರ್ತರು ಮಾತನಾಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ನಾನು ಯಾಕೆ ಟೆನ್ಶನ್ ಮಾಡ್ಕೋಬೇಕಾಗಿತ್ತು. 70-80 ಲಕ್ಷ ಕೊಟ್ಟು ಬಂದು ಇಲ್ಲಿ ಏನು ಮಾಡಲು ಆಗುತ್ತೆ.? ಯಾಕ್ರಿ ಹೀಗೆ ಮಾಡಿಕೊಂಡ್ರು ಎಂದಷ್ಟೇ ಹೇಳಿದ್ದೆ. ಯಾರಿಗೆ ಯಾರು ಲಂಚ ಕೊಟ್ರು ಅನ್ನೋದು ನಮಗೆ ಗೊತ್ತಿಲ್ಲ. ನಾನು ಹೇಳಿದ್ದೇ ಒಂದು, ಸುದ್ದಿ ಆಗಿದ್ದೇ ಮತ್ತೊಂದು ಎಂದರು.
ಇಂತಹ ಸಣ್ಣ ವಿಷಯಕ್ಕೆ ಆಯುಕ್ತರು ಅಮಾನತು ಮಾಡಿದ್ದು ತಪ್ಪು. ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿಗೆ ಕೋರಲಾಗಿದೆ ಎಂದು ಎಂಟಿಬಿ ಇದೇ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.