ಬೆಂಗಳೂರು: ಸಿಬ್ಬಂದಿಗಳಿಗೆ ಕಿರುಕುಳ ಆರೋಪದ ಹಿನ್ನೆಲೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅವರ ಕಚೇರಿ ಸಿಬ್ಬಂದಿಗಳು ಡಿಸಿಪಿ ನಿಶಾ ವಿರುದ್ಧ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ನಿಶಾ ಜೇಮ್ಸ್ ರನ್ನು ವರ್ಗಾವಣೆ ಮಾಡಿ ಕ್ರಮ ಕೈಗೊಂಡಿದೆ. ಬೆಂಗಳೂರು ಪೊಲೀಸ್ ಆಡಳಿತ ವಿಭಾಗಕ್ಕೆ ಬಿ.ಎಂ. ಲಕ್ಷ್ಮಿ ಪ್ರಸಾದ್ ನೇಮಕ ಮಾಡಲಾಗಿದ್ದು, ನಿಶಾ ಅವರನ್ನು ಐ.ಎಸ್.ಡಿಗೆ ವರ್ಗಾವಣೆ ಮಾಡಲಾಗಿದೆ.
ಕಳೆದ ಸೆ. 3 ರಂದು ಎಡಿಜಿಪಿ ಸಲೀಂರಿಗೆ ಸಿಬ್ಬಂದಿ ದೂರು ನೀಡಿದ್ದರು. ನಮಗೆ ಮಾನಸಿಕ ಕಿರುಕುಳ ನೀಡಿ ನಮ್ಮ ಭವಿಷ್ಯದಲ್ಲಿ ಚೆಲ್ಲಾಟ ಮಾಡುತ್ತಾರೆ ಎಂದು ಪೊಲೀಸ್ ಸಿಬ್ಬಂದಿಗಳು ದೂರಿನಲ್ಲಿ ಆರೋಪ ಮಾಡಿದ್ದರು. ಸುಮಾರು 26 ಎಸ್.ಡಿ.ಎ, ಎಫ್.ಡಿ.ಎ ಸಿಬ್ಬಂದಿ ಲಿಖಿತ ದೂರಿಗೆ ಸಹಿ ಮಾಡಿದ್ದರು. ಅದರನ್ವಯ ಇದೀಗ ನಿಶಾ ಜೇಮ್ಸ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.