ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಇಂದು ವಿಧಾನಸೌಧದಲ್ಲಿ ಚರ್ಚೆ ನಡೆಯುವ ವೇಳೆ ಗೊಂದಲ ಸೃಷ್ಟಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ರೈತರೊಂದಿಗೆ ಸಭೆ ನಡೆಸಿದರು. ಈ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಭಾಗವಹಿಸಿದ್ದರು. ಕಬ್ಬಿಗೆ ಬೆಲೆ ನಿಗದಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಸಂಬಂಧದ ಸಭೆಯಲ್ಲಿ, ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿದ್ದಕ್ಕೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದರು.
ಒಂದೋ ಅವರಿಬೇಕು. ಇಲ್ಲವೇ ನಾವು ಇರಬೇಕು ಎಂಬುದಾಗಿ ಸಚಿವರ ಮುಂದೆಯೇ ಕೆಲ ರೈತರು ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಕೋಡಿಹಳ್ಳಿ ಚಂದ್ರಶೇಖರ್ ಇಲ್ಲಿ ವೈಯಕ್ತಿಕ ವಿಷಯ ತರುವುದು ಸರಿಯಲ್ಲ. ಆರೋಪ ಕುರಿತಂತೆ ಸಿಎಂಗೆ ಮನವಿ ಸಲ್ಲಿಸಿದ್ದೇನೆ. ನಾನು ತನಿಖೆ ನಡೆಸಿ, ತಪ್ಪು ಸಾಬೀತಾದರೇ ಯಾವುದೇ ಶಿಕ್ಷೆಗೂ ಸಿದ್ಧ. ಆರೋಪ ಬಂದ ತಕ್ಷಣ ಅಪರಾಧಿಯಲ್ಲ ಎಂದು ಹೇಳಿದರು.
ಕೋಡಿಹಳ್ಳಿ ಚಂದ್ರಶೇಖರ್ ಅವರ ಮಾತಿಗೂ ರೈತರು ಮಣಿಯದೇ ಇದ್ದಾಗ, ಎರಡು ರೈತರ ಬಣಗಳ ನಡುವೆ ವಾಗ್ವಾದ ಏರ್ಪಟ್ಟಿತು. ಕೊನೆಗೆ ರೈತ ಮುಖಂಡರಾದ ಸುನಂದಾ ಜಯರಾಂ ಸೇರಿ ಹಲವು ಮಧ್ಯಪ್ರವೇಶಿಸಿ, ಸಭೆಯ ವಿಷಯದ ಕಡೆಗೆ ಗಮನಕೊಡಬೇಕೆಂದು ಮನವಿ ಮಾಡಿದಾಗ, ಸಭೆ ಮುಂದುವರೆಯಿತು.