“RSS ದೇಶಭಕ್ತಿ ಉದ್ದೀಪಿಸುವ ಸಂಸ್ಥೆ ಹೊಟ್ಟೆಕಿಚ್ಚಿನಿಂದ ಟೀಕಿಸುವವರ ಸಮಸ್ಯೆಗೆ ಮದ್ದಿಲ್ಲ” ಎಡಚಿಂತಕರಿಗೆ ಪ್ರಮೋದ್ ಮಧ್ವರಾಜ್ ಟಾಂಗ್

ಉಡುಪಿ: RSS ಶಕ್ತಿಯನ್ನು ಸಹಿಸದೇ ಕೆಲವರು ಟೀಕೆ ಮಾಡುವವರಿದ್ದಾರೆ. ಸಂಘದ ಬಗ್ಗೆ ಗೊತ್ತಿದ್ದೂ ಹೊಟ್ಟೆಕಿಚ್ಚಿನಿಂದ ಮಾತನಾಡುವ ಕೆಲವರ ಸಮಸ್ಯೆಗೆ ಮದ್ದಿಲ್ಲ ಅಂತ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.ಉಡುಪಿಯ ಪರ್ಕಳದಲ್ಲಿ ನಡೆದ ಆರ್ ಎಸ್ ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಪ್ರಮೋದ್ ಮಧ್ವರಾಜ್ ಭಾಗಿಯಾಗಿ ಕಸರತ್ತುಗಳು, ಯೋಗ ಪಥಸಂಚಲನ ವೀಕ್ಷಿಸಿ ಮಾತನಾಡಿದರು.

ಸಂಘದ ಬಗ್ಗೆ ಹೊಟ್ಟೆಕಿಚ್ಚಿನಿಂದ ಮಾತನಾಡುವವರಿಗೆ ಮದ್ದಿಲ್ಲ. ಅಜ್ಞಾನದಿಂದ ಮಾತನಾಡುವವರು RSS ನ ಒಳಗೆ ಬಂದು ಜ್ಞಾನ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಸದಾ ಆರ್ ಎಸ್ ಎಸ್ ಟೀಕಿಸುವ ಸಿದ್ದರಾಮಯ್ಯ ಹಾಗೂ ಎಡಪಂಥೀಯ ಚಿಂತಕರಿಗೆ ಟಾಂಗ್ ಕೊಟ್ಟ ಪ್ರಮೋದ್ ಮಧ್ವರಾಜ್, ಆರ್ ಎಸ್ ಎಸ್ ದೇಶಭಕ್ತಿ ದೇಶಪ್ರೇಮ ದೇಶ ನಿಷ್ಠೆಯ ಸಂಘಟನೆ. ದೇಶದ ಕಟ್ಟಕಡೆಯ ಬಡವನ ಬಗ್ಗೆ ಸೇವಾ ರೂಪದಲ್ಲಿ ಆರ್ ಎಸ್ ಎಸ್ ಕೆಲಸ ಮಾಡುತ್ತಿದೆ. ಕಳೆದ ಐದು ತಿಂಗಳಲ್ಲಿ ನಾನು ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ‌ ಸಂಘದ ಹೊರಗೆ ಇದ್ದು ಟೀಕೆ ಮಾಡುವುದು ಸುಲಭ ಎಂದರು.

ದೇಶ ಕಟ್ಟುವ ಕೆಲಸ ಸಂಸ್ಕಾರ ಉದ್ದೀಪಿಸುವ ಕೆಲಸ ವನ್ನು ಆರ್ ಎಸ್ ಎಸ್ ಮಾಡುತ್ತಿದೆ. ಕಟ್ಟ ಕಡೆಯ ವ್ಯಕ್ತಿಯ ಶಿಕ್ಷಣ ಮತ್ತು ಆರೋಗ್ಯಕ್ಕೆ RSS ಸೇವೆ ಸಲ್ಲಿಸುತ್ತಿದೆ. ಸಂಘವನ್ನು ತಿಳಿದುಕೊಳ್ಳದೆ ವಿರೋಧ ಮಾತನಾಡಬಾರದು. ನಾನು ಕೂಡ ಹಿಂದೆ ಆರ್ ಎಸ್ ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆ. ಆರ್ ಎಸ್ ಎಸ್ ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ. ಅಜ್ಞಾನದಿಂದ ಸಂಘದ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ ಎಂದರು.