ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಂಡ ಬಳಿಕ ಮೊದಲ ಪ್ರಕರಣ ದಾಖಲಾಗಿದ್ದು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಮುಯೀನ್ (23) ಬಂಧಿತ ಆರೋಪಿ. ಈತ ಹಿಂದೂ ಯುವತಿಯನ್ನು ಪ್ರೀತಿಸಿ ನಿಯಮ ಬಾಹಿರವಾಗಿ ಇಸ್ಲಾಂಗೆ ಮತಾಂತರಿಸಿದ್ದ. ಈ ಹಿನ್ನೆಲೆಯಲ್ಲಿ ಯಶವಂತಪುರ ಪೊಲೀಸರು ಬಿಕೆ ನಗರದ ನಿವಾಸಿ ಸಯ್ಯದ್ ಮುಯೀನ್ ನನ್ನು ಅರೆಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದ ಯುವತಿ ಜೊತೆ ಸೈಯದ್ ಪ್ರೀತಿ ಮಾಡಿದ್ದ. ನಂತರ ಮದುವೆಯಾಗಬೇಕು ಎಂದರೆ ಮತಾಂತರವಾಗಬೇಕು ಎಂದು ಯುವತಿಗೆ ಒತ್ತಡ ಹೇರಿದ್ದ. ಬಳಿಕ ಸೈಯದ್ ಮುಯೀನ್ ನಂಬಿ ಯುವತಿ ಮಸೀದಿಯೊಂದರಲ್ಲಿ ಕಾನೂನು ಬಾಹಿರವಾಗಿ ಮತಾಂತರವಾಗಿದ್ದಾಳೆ. ಇನ್ನು ಯುವತಿಯ ತಂದೆ–ತಾಯಿ, ಉತ್ತರ ಪ್ರದೇಶದವರು. ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಬಿ.ಕೆ.ನಗರದಲ್ಲಿ ನೆಲೆಸಿದ್ದರು.
ಯುವತಿ ಆ. 5 ರಂದು ಸಂಜೆ ಅಂಗಡಿಗೆ ಹೋಗಿ ಬರುವುದಾಗಿ ಪೋಷಕರಿಗೆ ಹೇಳಿ ಹೋಗಿದ್ದಳು. ಆದರೆ ರಾತ್ರಿಯಾದರೂ ಯುವತಿ ಮನೆಗೆ ವಾಪಸು ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು, ಹಲವೆಡೆ ಹುಡುಕಾಡಿದ್ದರು. ಸುಳಿವು ಸಿಗದಿದ್ದರಿಂದ, ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಆರೋಪಿ ಸೈಯದ್ ಮೋಯಿನ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಬಳಿಕ ಪೊಲೀಸರು ಸಯ್ಯದ್‌ನನ್ನು ಕರೆಸಿ ವಿಚಾರಿಸಿದಾಗ, ಆಂಧ್ರದ ಪೆನುಕೊಂಡ ದಲ್ಲಿರುವ ಮಸೀದಿಯೊಂದಕ್ಕೆ ಕರೆದೊಯ್ದು ಯುವತಿಯನ್ನು ಮತಾಂತರಿಸಿರುವ ಬಗ್ಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮತಾಂತರ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.