ಬಳ್ಳಾರಿ: ಸೆಪ್ಟೆಂಬರ್ 7, 2022 ರಂದು ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿಯಿಂದ ಪ್ರಾರಂಭವಾದ ‘ಭಾರತ್ ಜೋಡೋ’ ಯಾತ್ರೆ ಶನಿವಾರ 1,000 ಕಿಲೋಮೀಟರ್‌ಗಳನ್ನು ಕ್ರಮಿಸುವ ಮೂಲಕ ಹೊಸ ಮೈಲಿಗಲ್ಲು ತಲುಪಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ‘ಭಾರತ್ ಜೋಡೋ’ ಯಾತ್ರೆ ಇಂದು ಮುಂಜಾನೆ ಬಳ್ಳಾರಿ ಜಿಲ್ಲೆ ಪ್ರವೇಶಿಸಿದ್ದು, ಬಳ್ಳಾರಿಯ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಇಂದು ಮಧ್ಯಾಹ್ನ ಬಹಿರಂಗ ಸಭೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಸಮಾವೇಶದ ಉದ್ಘಾಟನೆ ನಡೆಯಲಿದ್ದು ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ ಘಡ ಸಿಎಂ ಭೂಪೇಶ್ ಬಘೇಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ, ದಿಗ್ವಿಜಯ ಸಿಂಗ್ ಸೇರಿದಂತೆ ಹಲವು ರಾಜ್ಯದ ಪ್ರಮುಖರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಕನ್ಯಾಕುಮಾರಿ ಯಿಂದ ಬಳ್ಳಾರಿಗೆ 1 ಸಾವಿರ ಕಿಲೋಮೀಟರ್ ದೂರ ಕ್ರಮಿಸಿ ಬಂದಿದ್ದೇವೆ. ಇದು ಒಂದು ಬಹಳ ವಿಶೇಷವಾದ ಸಭೆಯಾಗಿದೆ ಎಂದು ಇಂದಿನ ಕಾರ್ಯಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.