ಭಟ್ಕಳ: ಅನ್ಯ ಕೋಮಿನ ಅಪರಿಚಿತ ಮೂವರು ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ರಾಡ್ ಮತ್ತು ಚೈನನಿಂದ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಸುಳ್ಳು ಪ್ರಕರಣ ದಾಖಲಿಸಿದ ಇಬ್ಬರು ಹಿಂದೂ ಸಂಘಟನೆಯ ಕಾರ್ಯಕರ್ತರುನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಶಿರಾಲಿಯ ನವೀನ ಸೋಮಯ್ಯ ನಾಯ್ಕ ಮತ್ತು ನವೀನ ವೆಂಕಟೇಶ ನಾಯ್ಕ ಬಂಧನಕ್ಕೊಳಗಾದ ಇಬ್ಬರು ಹಿಂದೂ ಸಂಘಟನೆಯ ಕಾರ್ಯಕರ್ತರು. ಮುರ್ಡೇಶ್ವರ ಹಾಗೂ ಭಟ್ಕಳ ಭಾಗದಲ್ಲಿ ಕೋಮು ಸಂಘರ್ಷ ಹುಟ್ಟಿಸಿ ಶಾಂತಿ ಕದಡುವ ಉದ್ದೇಶದಿಂದ ನವೀನ ಸೋಮಯ್ಯ ನಾಯ್ಕ ತಾನು ಅಕ್ಟೋಬರ್ 8 ರ ರಾತ್ರಿ ಮಾವಿನಕಟ್ಟೆಯಿಂದ ಮುರ್ಡೇಶ್ವರದ ಕುಂಬಾರಕೇರಿಯಲ್ಲಿರುವ ತನ್ನ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ಇರುವಾಗ ಟಿವಿಎಸ್ ಜೂಪಿಟರ್ ಸ್ಕೂಟಿಯಲ್ಲಿ ಬಂದ ವ್ಯಕ್ತಿಗಳು ರಾಡ್ ಮತ್ತು ಚೈನ್ ನಿಂದ ಹಲ್ಲೆಮಾಡಿ ಹೋಗಿದ್ದು ಅವರು ಹಿಂದಿ ಮಾತನಾಡುತ್ತಿದ್ದರು. ಅದರಲ್ಲಿ ಓರ್ವ ಬಿಳಿ ಪಂಚೆ ಉಟ್ಟಿದ್ದು ಅನ್ಯಕೋಮಿನವರು ಎಂದು ಮುರ್ಡೆಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುರ್ಡೇಶ್ವರ ಪೊಲೀಸರು ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಎಸ್ಪಿ ಡಾ. ಸುಮನ್ ಡಿ ಪೆನ್ನೆಕರ್ ಮತ್ತು ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ
ಮಾರ್ಗದರ್ಶನದಲ್ಲಿ ಪ್ರಕರಣವನ್ನು ಸಿಪಿಐ ಮಹಾಬಲೇಶ್ವರ ನಾಯಕ ತಂಡ ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ ಈ ಇಬ್ಬರು ಆರೋಪಿಗಳು ವಯಕ್ತಿಕ ಕಾರಣಕ್ಕೆ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ನವೀನ ಸೋಮಯ್ಯ ನಾಯ್ಕನಿಗೆ ನವೀನ್ ವೆಂಕಟೇಶ ನಾಯ್ಕ ಕೀ ಚೈನ್ ನಿಂದ ತಲೆಗೆ ಹಲ್ಲೆ ನಡೆದಿರುವ ಬಗ್ಗೆ ತನಿಖೆಯಿಂದ ಪತ್ತೆಯಾಗಿದೆ.
ಸದ್ಯ ದೂರು ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತ ನವೀನ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಸುಳ್ಳು ದೂರು ನೀಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.