ನವದೆಹಲಿ: ದೇಶಾದ್ಯಂತ ವಿವಾದ ಸೃಷ್ಟಿಸಿದ್ದ ಹಿಜಾಬ್ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ಪ್ರಕಟಿಸಿದ್ದಾರೆ. ನ್ಯಾ. ಹೇಮಂತ್ ಗುಪ್ತಾ ಅವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ಅರ್ಜಿಯನ್ನು ತಳ್ಳಿಹಾಕಿ ತಮ್ಮ ತೀರ್ಪನ್ನು ಪ್ರಕಟಿಸಿದ್ದು, ನ್ಯಾ. ಧುಲಿಯಾರವರು ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ತಿರಸ್ಕರಿಸಿ ತೀರ್ಪು ನೀಡಿದ್ದಾರೆ. ಇಬ್ಬರು ವಿಭಿನ್ನ ತೀರ್ಪು ನೀಡಿರುವುದರಿಂದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಹಿಜಾಬ್ ಪ್ರಕರಣದ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ವಿಸ್ತೃತ ನ್ಯಾಯಪೀಠ ರಚಿಸುವ ಸಾಧ್ಯತೆಯಿದೆ. ಪ್ರಕರಣವನ್ನು ಮತ್ತೊಮ್ಮೆ ಆಮೂಲಾಗ್ರ ಪರಿಶೀಲಿಸಿದ ನಂತರ ವಿಸ್ತೃತ ನ್ಯಾಯಪೀಠವು ತನ್ನ ತೀರ್ಪು ನೀಡಲಿದೆ. ಈ ಪ್ರಕರಣದಲ್ಲಿ ವಿಸ್ತೃತ ನ್ಯಾಯಪೀಠ ರಚಿಸುವುದು ಮತ್ತು ವಿಚಾರಣೆಯ ಸ್ವರೂಪ ನಿರ್ಧರಿಸುವುದು ಮುಖ್ಯ ನ್ಯಾಯಮೂರ್ತಿಯ ವಿವೇಚನೆಗೆ ಬಿಟ್ಟ ಅಧಿಕಾರವಾಗಿರುತ್ತದೆ.