ಭಟ್ಕಳ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಾನಸಿಕ ಅಸ್ವಸ್ಥೆಯಾಗಿದ್ದ ಅಲೆಮಾರಿ ಭಿಕ್ಷುಕಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೈಲೂರು ಕ್ರಾಸ್ ಸಮೀಪ ನಡೆದಿದೆ.
ಪಿರ್ಯಾದಿಯು ತನ್ನ ಸ್ನೇಹಿತನೊಂದಿಗೆ ವೈಯಕ್ತಿಕ ಕೆಲಸದ ನಿಮಿತ್ತ ಹೊನ್ನಾವರಕ್ಕೆ ಹೋಗಿ ಮರಳಿ ಬರುವ ವೇಳೆ ರಾಷ್ಟ್ರೀಯ ಹೆದ್ದಾರಿ 66 ಬೈಲೂರು ಕ್ರಾಸ್ ಸಮೀಪ ಸುಮಾರು 35 ರಿಂದ 40 ವರ್ಷದ ಅಪರಿಚಿತ ಮಹಿಳೆ ಮೃತಳಾಗಿ ಬಿದ್ದುದನ್ನು ಗಮನಿಸಿದ್ದಾರೆ. ಮೃತಳ ಎರಡು ಕಾಲಿನ ಪಾದಗಳಿಗೆ ಗಂಭೀರವಾಗಿ ಗಾಯಗಳಾಗಿತ್ತು. ಈಕೆ ಕೆಲವು ದಿನಗಳಿಂದ ಹರಿದ ಬಟ್ಟೆಗಳನ್ನು ಧರಿಸಿಕೊಂಡು ಕೈ ಚೀಲ ಹಿಡಿದುಕೊಂಡು ಬೈಲೂರು ಕ್ರಾಸ್ ಸಣ್ಣಬಲಸೆ ಹೆದ್ದಾರಿ ಬದಿಯಲ್ಲಿ ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ಥಳ ರೀತಿಯಲ್ಲಿ ತಿರುಗಾಡುತ್ತಿದ್ದಳು. ಆದರೆ ಅಪರಿಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದು ಆಕೆ ಮೃತಪಟ್ಟಿದ್ದಾಳೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.