ತೆಲುಗು ಟೈಟಾನ್ಸ್ ವಿರುದ್ಧ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್.!

ಬೆಂಗಳೂರು: 9 ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ತಂಡ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಟೂರ್ನಿಯ 2 ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 34-29 ಅಂಕಗಳಿಂದ ಗೆಲುವು ದಾಖಲಿಸುವ ಮೂಲಕ ಮಹೇಂದರ್ ಸಿಂಗ್ ಬಳಗ ಭರ್ಜರಿ ಆರಂಭ ಮಾಡಿದೆ.

ತವರು ಪ್ರೇಕ್ಷಕರ ಬೆಂಬಲದೊಂದಿಗೆ ರೋಚಕವಾಗಿ ಸಾಗಿದ ಕಾದಾಟದಲ್ಲಿ ಬುಲ್ಸ್ ತಂಡ ಕೊನೆಯ 10 ನಿಮಿಷಗಳಲ್ಲಿ ಮೇಲುಗೈ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡಿತು. ಸಮಬಲದಿಂದ ಕೂಡಿದ ಮೊದಲಾರ್ಧದ ಬಳಿಕ ದ್ವಿತೀಯಾರ್ಧದಲ್ಲಿ ಬುಲ್ಸ್​ಗೆ ಹಿನ್ನಡೆಯೂ ಎದುರಾಯಿತು.

ಆದರೆ ಪಂದ್ಯ ಮುಕ್ತಾಯಕ್ಕೆ 7 ನಿಮಿಷಗಳಿರುವಾಗ ಟೈಟಾನ್ಸ್ ತಂಡವನ್ನು ಆಲೌಟ್ ಬಲೆಗೆ ಬೀಳಿಸಿದ ಬುಲ್ಸ್ ತಂಡ ಮೇಲುಗೈ ಸಾಧಿಸಿ ಗೆಲುವು ದಾಖಲಿಸಿದೆ.