ಬೆಂಗಳೂರು: ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್ ಗಳು ಲಂಚದಾಸೆಗೆ ಒಳಗಾಗಿ ಓಡಿ ಹೋಗಿದ್ದು, ಇದೀಗ ಮೂರನೇ ಪ್ರಕರಣದಲ್ಲಿ ಮತ್ತೊರ್ವ ಇನ್‌ಸ್ಪೆಕ್ಟರ್ ನಾಪತ್ತೆಯಾಗಿದ್ದಾರೆ. ಪ್ರವೀಣ್ ಮಹೇಶ್ವರಪ್ಪ ಚಿಕ್ಕಜಾಲ ಠಾಣೆಯಿಂದ ಎಸ್ಕೇಪ್ ಆಗಿರುವ ಇನ್‌ಸ್ಪೆಕ್ಟರ್.
ಗುತ್ತಿಗೆದಾರ ಪ್ರಕಾಶ್ ಎಂಬುವರ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿ ತ್ವರಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಹಾಗೂ ಪ್ರಕಾಶ್ ಕುಟುಂಬದವರ ಹೆಸರು ಸೇರಿಸದೇ ಇರಲು ಇನ್‌ಸ್ಪೆಕ್ಟರ್ ಪ್ರವೀಣ್ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 3 ಲಕ್ಷ ರೂ. ಗಳನ್ನು ಹೆಡ್ ಕಾನ್‌ಸ್ಟೇಬಲ್ ರವಿ ಮೂಲಕ ಸ್ವೀಕರಿಸಿದ್ದರು.
ಆ ಬಳಿಕ ಮತ್ತೆ ಐದು ಲಕ್ಷ ರೂ. ಲಂಚ ನಿಡುವಂತೆ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಬೇಡಿಕೆ ಇಟ್ಟಿದ್ದು, ನಿರಾಕರಿಸಿದ್ದಕ್ಕೆ ಗುತ್ತಿಗೆದಾರ ಪ್ರಕಾಶ್ ಪೋಷಕರಿಗೆ ಹಾಗೂ ಬಾಮೈದನಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಗುತ್ತಿಗೆದಾರನ ಸಂಬಂಧಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಲಂಚದ ಹಣ ಸ್ವೀಕರಿಸಿ ಇನ್ನೇನು ಲೋಕಾ ಬಲೆಗೆ ಬೀಳುವ ಮುನ್ನ ಕಾನ್‌ಸ್ಟೇಬಲ್ ರವಿ ಎಚ್ಚೆತ್ತು ಪರಾರಿಯಾಗಿದ್ದಾನೆ. ಲಂಚ ಕೊಡಲು ಹೋಗಿದ್ದ ವ್ಯಕ್ತಿಗೆ ಬಂದ ಫೋನ್ ನಂಬರ್ ಟ್ರೂ ಕಾಲರ್ ಆಪ್ ನಲ್ಲಿ ನೋಡಿ ಎಸಿಬಿ ಪೊಲೀಸ್ ಎಂದು ಹೆದರಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆದರೆ ಲಂಚ ಸ್ವೀಕರಿಸುವ ಮುನ್ನವೇ ಪೋನ್ ಪೇ ಮೂಲಕ 10 ಸಾವಿರ ಹಣವನ್ನು ಮೂರನೇ ವ್ಯಕ್ತಿಯ ಮೊಬೈಲ್ ಗೆ ಹಾಕಿಸಿಕೊಂಡು ಲಂಚ ಪಡೆದುಕೊಂಡಿದ್ದ.
ಸಾಕ್ಷಾಧಾರಗಳನ್ನು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು ಕಾನ್‌ಸ್ಟೇಬಲ್ ರವಿಯನ್ನು ಅರೆಸ್ಟ್ ಮಾಡಿದ್ದಾರೆ. ಕಾನ್‌ಸ್ಟೇಬಲ್ ಬಂಧನ ಆಗುತ್ತಿದ್ದಂತೆ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪ್ರವೀಣ್ ನಿರೀಕ್ಷಣಾ ಜಾಮೀನು ಪಡೆಯುವ ಸಲುವಾಗಿ ಠಾಣೆಗೆ ಹಾಜರಾಗದೇ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.