ನವದೆಹಲಿ: ದೇಶದಲ್ಲಿ 5ಜಿ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಈ ಮೂಲಕ ಭಾರತದ ಇಂಟರ್ನೆಟ್ ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗಿದೆ.
ಪ್ರಧಾನಿ ಮೋದಿ ಶನಿವಾರ (ಅ.1) ದೆಹಲಿಯ ಪ್ರಗತಿ ಮೈದಾನದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದ್ದು, ಜನರು ಎದುರಿಸುತ್ತಿರುವ ಇಂಟರ್ನೆಟ್ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದರೊಂದಿಗೆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಳಕೆಗೆ ಗ್ರೀನ್ ಸಿಗ್ನಲ್ ದೊರೆತಿದೆ. ಮುಂದಿನ ದಿನಗಳಲ್ಲಿ ಜಿಯೋ, ಏರ್ಟೆಲ್ 5ಜಿ ಸೇವೆಯನ್ನು ಗ್ರಾಹಕರಿಗೆ ನೀಡಲಿದೆ.
ದೇಶದಲ್ಲಿ 5ಜಿ ಸೇವೆ ಸಾಮಾನ್ಯ ಜನರಿಗೆ ತಲುಪಲು ಇನ್ನೂ 1 ವರ್ಷ ಬೇಕಾಗಬಹುದು ಎಂದು ಹೇಳಲಾಗಿದೆ. ತರಂಗಾಂತರ ಹರಾಜಿನಲ್ಲಿ ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ 5ಜಿ ಸೇವೆಯನ್ನು ಆರಂಭಿಸಲಿದ್ದೇವೆ ಎಂದು ಸಂವಹನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
5G ಇಂಟರ್ನೆಟ್ ಸೇವೆಯಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು. ಇಂಟರ್ನೆಟ್ ಕರೆಗಳಲ್ಲಿ ಧ್ವನಿ ಬಹಳ ಸ್ಪಷ್ಟವಾಗಿರುತ್ತದೆ. 5ಜಿ ಯಿಂದ 2 ಜಿಬಿ ಚಲನಚಿತ್ರವನ್ನು ಕೇವಲ 10-20 ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಮೊಬೈಲ್ ಇಂಟರ್ನೆಟ್ ವೇಗದ ವಿಷಯದಲ್ಲಿ ಭಾರತವು ಪ್ರಪಂಚದಲ್ಲಿ 117ನೇ ಸ್ಥಾನದಲ್ಲಿದೆ ಎಂದು ಮೂಲಗಳು ತಿಳಿಸಿವೆ.