RSS ಬಗ್ಗೆ ಸುಖಾಸುಮ್ಮನೆ ಆರೋಪ ಮಾಡಬೇಡಿ – ರೇಣುಕಾಚಾರ್ಯ

ಬೆಂಗಳೂರು: RSS ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅನುಭವಸ್ಥರು. ಅವರು ಸಿಎಂ ಆಗಿದ್ದಾಗ ಪಿಎಫ್‍ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಸ್ ಪಡೆದುಕೊಂಡರು. ಬಿಜೆಪಿಯ ಹಲವು ಕಾರ್ಯಕರ್ತರ ಕೊಲೆಗಳು ಆದವು ಎಂದು ವಾಗ್ದಾಳಿ ನಡೆಸಿದರು.

RSS ರಾಷ್ಟ್ರೀಯವಾದಿ ಸಂಘಟನೆ. ಕೋವಿಡ್ ಸಂಕಷ್ಟವೂ ಸೇರಿದಂತೆ ನೆರೆ-ಬರ ಸ್ಥಿತಿಯ ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸಿದೆ. ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದರು. ಇನ್ನೂ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವುದು ಭಾರತ್ ಜೋಡೋ ಯಾತ್ರೆಯಲ್ಲ, ಅದು ಭಾರತ್ ತೋಡೋ ಯಾತ್ರೆ. ಅವರಿಗೆ ಇನ್ನೂ ಪ್ರಬುದ್ಧತೆ ಇಲ್ಲ ಎಂದು ಲೇವಡಿ ಮಾಡಿದರು.