ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಎರಡನೇ ಬಾರಿಗೆ ಪೆರಿಷಬಲ್ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದಲ್ಲಿ 48,130 ಟನ್ಗಳಷ್ಟು ಸಾಗಣೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿತ್ತು. 2021-22 ಹಣಕಾಸು ವರ್ಷದಲ್ಲಿ 52,366 ಮೆಟ್ರಿಕ್ ಟನ್ನಷ್ಟು ಬೇಗ ಕ್ಷಯಿಸದ ಹಣ್ಣು, ತರಕಾರಿ, ಹೂ ನಂತಹ ಪೆರಿಷಬಲ್ ಸರಕು ಸಾಗಣೆ ಮಾಡುವ ಮೂಲಕ ಮತ್ತೊಮ್ಮೆ ಮೊದಲ ಸ್ಥಾನ ಪಡೆದುಕೊಂಡಿದೆ.
ಪ್ರತಿ ನಿತ್ಯ ಬೆಂಗಳೂರಿನಿಂದ 33 ಸರಕು ಸಾಗಣೆ ವಿಮಾನಗಳು ಲಂಡನ್, ಸಿಂಗಾಪುರ ಸೇರಿದಂತೆ ಒಟ್ಟು 48 ವಿದೇಶಗಳಿಗೆ ರಫ್ತು ಮಾಡುತ್ತಿದೆ. ದಕ್ಷಿಣ ಭಾರತದಿಂದಲೇ ಒಟ್ಟು ಶೇ.41ರಷ್ಟು ಪ್ರಮಾಣದಲ್ಲಿ ಪೆರಿಷಬಲ್ ಸರಕನ್ನು ರಫ್ತು ಮಾಡಲಾಗಿದೆ. ಅದರಲ್ಲಿ 36, 493 ಎಂ.ಟಿ. ಪೌಲ್ಟ್ರಿ ಹಾಗೂ 1,952 ಎಂ.ಟಿ. ಹೂಗಳನ್ನು ರಫ್ತು ಮಾಡಲಾಗಿದೆ ಎಂದು ಬಿಐಎಎಲ್ನ ಮುಖ್ಯ ಡೆವಲಪರ್ ಆಫೀಸರ್ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.