ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿರುವುದು ಪ್ರಧಾನಿ ಮೋದಿಯ ತಾಕತ್ತು – ಸಿ. ಸಿ ಪಾಟೀಲ್

ಶಿರಸಿ: ಗೋಮಾಂಸ ಭಕ್ಷಣೆ ಮಾಡಿದ್ರು, ಗೋಮಾಂಸ ತಿಂತೇನೆ ಎಂಬ ಹೇಳಿಕೆ ಕೊಟ್ರು, ಗೋಮಾಂಸ ತಿಂದವರು ಏನೇನು ಆದರು ಎಂಬುದನ್ನ ನೀವೇ ನೋಡಿದ್ರಿ. ಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧ ಮಾಡಿರುವುದು ಸ್ವಾಗತಾರ್ಹ ಎಂದು ಶಿರಸಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಹೇಳಿದರು. ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಅವರು ದೇಶದ್ರೋಹಿ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರನ್ನು ಬಂಧಿಸಿದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಈ ರಾಜ್ಯದ ನಾಯಕರು ಈಗ ಏನು ಹೇಳುತ್ತಾರೆ ಎಂಬುದನ್ನು ಕೇಳಿನೋಡಬೇಕು. ಎನ್.ಐ.ಎ ದಾಳಿಗಳಿಂದ ವಿಚ್ಛಿದ್ರಕಾರಕ ಶಕ್ತಿಗಳು ಯಾವುದರಲ್ಲಿ ತೊಡಗಿದ್ದರು ಎನ್ನುವುದು ತಿಳಿದು ಬಂದಿದೆ. ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದು ದೇಶದ ಪ್ರಧಾನಿಯ ತಾಕತ್ತು. ಅಪಾಯಕಾರಿ ಶಕ್ತಿಗಳನ್ನ ಬುದ್ಧಿಜೀವಿಗಳು ಬೆಂಬಲಿಸುವುದು ಯಾಕೆ ಎನ್ನುವುದನ್ನು ನೀವೂ ಕೇಳಬೇಕು ನಾವು ಕೇಳಬೇಕು. ಇವರನ್ನು ಬೆಂಬಲಿಸುವುದಾದರೇ ಅವರು ಯಾರು ಎಂಬುದನ್ನ ನಾವು ತಿಳಿದುಕೊಳ್ಳಬೇಕು. ಕೇವಲ ಬಗಲಿಗೆ ಚೀಲ ಹಾಕಿಕೊಂಡು ಹೋದ್ರೆ ಬುದ್ದಿಜೀವಿಗಳು ಆಗೋದಿಲ್ಲ. ದೇಶದ ಅಖಂಡತೆ, ಏಕತೆ ಮೊದಲು ಮುಖ್ಯವಾಗಿದ್ದು,
ಅದನ್ನು ಪ್ರಧಾನಿ ಕಾಪಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

ಇನ್ನು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಂಚಮಸಾಲಿ ಪೀಠದ ಜಯ ಮುತ್ಯುಂಜಯ ಜಗದ್ಗುರುಗಳು ಆ ಸಮಾಜದ ಗುರುಗಳಾಗಿ ಸಮಾಜದ ಏಳಿಗೆಗಾಗಿ ಒತ್ತಡ ತರುವುದು ಸ್ವಾಭಾವಿಕ. ಮುಖ್ಯಮಂತ್ರಿಗಳಿಗೆ ಪಂಚಮಸಾಲಿ ಸಮಾಜದ ಜೊತೆ ಜೊತೆಗೆ ಇತರೆ ಸಮಾಜದ ಏಳಿಗೆಯನ್ನು ನೋಡಬೇಕಾದ ಕಾನೂನಾತ್ಮಕವಾದ ಬೈಂಡಿಂಗ್ ಇರುತ್ತದೆ. ಆ ಬೈಂಡಿಂಗ್ ನಲ್ಲಿ ಇನ್ನೊಂದು ಸಮಾಜಕ್ಕೆ ಅನ್ಯಾಯವಾಗದ ರೀತಿಯಲ್ಲಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಕೊಡಿಸುವ ರೀತಿಯಲ್ಲಿ ಏನೆಲ್ಲಾ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆಯೋ ಆ ಎಲ್ಲಾ ಪ್ರಾಥಮಿಕ ಕ್ರಮದ ಹೆಜ್ಜೆಗಳನ್ನು ಮುಖ್ಯಮಂತ್ರಿಗಳು ದೃಡವಾಗಿಇಟ್ಟಿದ್ದಾರೆ.

ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗ ನೇಮಿಸಿ ಅದಕ್ಕೆ ಜಯಪ್ರಕಾಶ್ ಹೆಗಡೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಹದಿನೈದರಿಂದ ಹದಿನಾರು ಜಿಲ್ಲೆಗಳಲ್ಲಿ ಎಂಪೆರಿಕಲ್ ಡಾಟಾ ಸಂಗ್ರಹಿಸಲಾಗಿದೆ. ಎಂಪೆರಿಕಲ್ ಡಾಟ ಬರದೇ ನಾವು ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗ ಎಂದು ಘೋಷಣೆ ಮಾಡಿದರೇ ಚನ್ನೈ ,ಮಹಾರಾಷ್ಟ್ರದಲ್ಲಿ ಮಾಡಿದ ಮೀಸಲಾತಿ ಘೋಷಣೆ ರದ್ದಾದಂತೆ ಕೋರ್ಟ್ ನಲ್ಲಿ ತಡೆಯಾಜ್ಞೆ ಬರಬಾರದು. ಶಾಶ್ವತವಾಗಿ ಮೀಸಲಾತಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಸುರಕ್ಷತಾ ಕ್ರಮವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.