ಕಾರವಾರ: ಸಿಎಂ ಬಸವರಾಜ ಬೊಮ್ಮಾಯಿ ಗೋವಾದಿಂದ ಕಾರವಾರಕ್ಕೆ ಬಂದಿಳಿದು ರಸ್ತೆ ಮಾರ್ಗವಾಗಿ ಭಟ್ಕಳದತ್ತ ಹೊರಟಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್ ಕೂಡಾ ಸಿಎಂ ಜೊತೆ ಪ್ರಯಾಣ ಬೆಳೆಸಿದ್ದಾರೆ. ಭಟ್ಕಳದ ಮಳೆಹಾನಿ ಪ್ರದೇಶಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.
ನಿನ್ನೆ ಭಟ್ಕಳದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಅಲ್ಲದೇ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಹಲವಾರು ಗ್ರಾಮಗಳು ಜಲಾವೃತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.
ಮೊದಲು ಭಟ್ಕಳದ ಮುಟ್ಟಳ್ಳಿಗೆ ಭೇಟಿ ನೀಡಿ ಗುಡ್ಡಕುಸಿತವಾದ ಪ್ರದೇಶವನ್ನು ವೀಕ್ಷಿಸಲಿದ್ದಾರೆ. ಬಳಿಕ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಳೆಹಾನಿಯಿಂದ ಉಂಟಾದ ನಷ್ಟ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಲಿದ್ದಾರೆ. ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ.