ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಸ್ಥಾಪಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಆಗ್ರಹಿಸಿದೆ. ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯು ಉತ್ತಮ ತುರ್ತು ಚಿಕಿತ್ಸಾ ಆಸ್ಪತ್ರೆಯಿಂದ ವಂಚಿತವಾಗಿರುವುದು ದುರದೃಷ್ಟಕರ. ಇದು ಸರ್ಕಾರ ಹಾಗೂ ಇಲ್ಲಿಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ ಎಂದು ಮನವಿಯಲ್ಲಿ ಟೀಕಿಸಿದ್ದಾರೆ.
ತಕ್ಷಣ ಒಂದು ತಿಂಗಳೊಳಗಾಗಿ ಸರ್ಕಾರ ಏಮ್ಸ್ ಮಾದರಿಯಲ್ಲಿ ಸುಸಜ್ಜಿತ ಸೂಪರ್ ಸ್ಟೇಶಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನ್ನು ಜಿಲ್ಲಾ ಮಧ್ಯಭಾಗದಲ್ಲಿ ಪ್ರಾರಂಭಿಸಲು ನಿರ್ಣಯಿಸಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ರೈತ ಸಂಘದ ನೇತೃತ್ವದಲ್ಲಿ ರಾಜ್ಯವ್ಯಾಪಿ ರೈತ ಹೋರಾಟ ಕೈಗೊಳ್ಳುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘ, ಮೂಲ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಬೆಳಗಾವಿ ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜೇರಿ, ರೈತ ಮುಖಂಡರಾದ ರಾಘವೇಂದ್ರ ನಾಯಕ, ಶಿವಾನಂದ ಮುಗಳಿಹಾಳ, ಪ್ರಕಾಶ ನಾಯಕ ಮುಂತಾದವರು ಇದ್ದರು.