ಜಮ್ಮುಕಾಶ್ಮೀರ: ಕುಲ್ಗಾಮ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಅವಳಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಉಗ್ರರು ಸೇರಿದಂತೆ ಮೂವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
ಕುಲ್ಗಾಮ್‌ನ ಅಹ್ವಾಟೂ ಪ್ರದೇಶದಲ್ಲಿ ಭಯೋತ್ಪಾದಕರಿರುವ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕ ಹಿನ್ನೆಲೆ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದರು. ಜಂಟಿ ತಂಡಗಳು ಶಂಕಿತರ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದರಿಂದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ. ಬಟ್‌ಪೋರಾದ ಮೊಹಮ್ಮದ್ ಶಾಫಿ ಗನಿ ಮತ್ತು ಟಕಿಯಾ ಗೋಪಾಲ್‌ಪೋರಾದ ಮೊಹಮ್ಮದ್ ಆಸಿಫ್ ವಾನಿ ಅಲಿಯಾಸ್ ಯವರ್ ಹತ್ಯೆಯಾದವರು.
ನಂತರದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಇಎಂ ಸಂಬಂಧ ಹೊಂದಿರುವ ಪಾಕಿಸ್ತಾನಿ ಭಯೋತ್ಪಾದಕ ಅಬು ಹುರಾಹ್ ನನ್ನು ಕೊಲ್ಲಲಾಗಿದೆ. ಎನ್‌ಕೌಂಟರ್ ನಡೆದ ಎರಡೂ ಸ್ಥಳಗಳಿಂದ ಎಕೆ-56, ಎರಡು ಎಕೆ-47, ಪಿಸ್ತೂಲ್, ಗ್ರೆನೇಡ್, 4 ಮ್ಯಾಗಜೀನ್‌ಗಳು ಮತ್ತು ಪಿಸ್ತೂಲ್ ಮ್ಯಾಗಜೀನ್ ಸೇರಿದಂತೆ ಇನ್ನಿತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ತನಿಖೆಗಾಗಿ ಪ್ರಕರಣದ ದಾಖಲೆಗಳಿಗೆ ತೆಗೆದುಕೊಂಡಿದ್ದು, ಆಯಾ ಪೊಲೀಸ್ ಠಾಣೆಗಳಲ್ಲಿ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ