ರಾಜ್ಯದಲ್ಲಿ ಮುಂದುವರೆದ ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರ ಮೇಲಿನ ಖಾಕಿ ದಾಳಿ.!

ಬೆಂಗಳೂರು: ರಾಜ್ಯದಲ್ಲಿ ಪಿಎಫ್ಐ ಮುಖಂಡರು ಮತ್ತು ಕಾರ್ಯಕರ್ತರ ಮೆನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಬೆಳಗಾವಿ, ಕೋಲಾರ, ಕಲಬುರಗಿ ಹಾಗೂ ಉಡುಪಿಯಲ್ಲಿ ಕಾರ್ಯಾಚರಣೆ ನಡೆಸಿ ಪಿಎಫ್ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ನಡೆಸಿ ಐವರು ಪಿಎಫ್ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಫ್ಐ ಮುಖಂಡರ ಪಟ್ಟಿ ಸಿದ್ಧಪಡಿಸಿಕೊಂಡು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ವಶಕ್ಕೆ ಪಡೆದವರನ್ನು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಕೋಲಾರದಲ್ಲೂ ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ನಡೆದಿದ್ದು, ಆರು ಜನ‌ ಪಿಎಫ್ಐ ಮುಖಂಡರನ್ನು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನವಾಜ್ ಪಾಷಾ, ವಸೀಂ‌ ಪಾಷಾ, ಸಿದ್ದಿಕ್ ಪಾಷಾ, ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ, ಅಲ್ಲಾಬಕಾಶ್ ಬಂಧಿತ ಪಿಎಫ್ಐ ಸಂಘಟನೆ ಮುಖಂಡರು.

ಕಲಬುರಗಿಯಲ್ಲಿ ಕಳೆದ ರಾತ್ರಿ ಮತ್ತೆ ಪಿಎಫ್ಐ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಇಕ್ಬಾಲ್ ಕಾಲೋನಿಯ ಮಜಾರ್ ಹುಸೇನ್ ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈತ ಪಿಎಫ್ಐ ಸಂಘಟನೆಯ ಮಾಧ್ಯಮ ವಕ್ತಾರನಾಗಿದ್ದು, 4 ದಿನಗಳ ಹಿಂದೆ ಬಂಧಿತನಾದ ಪಿಎಫ್ಐ ಜಿಲ್ಲಾಧ್ಯಕ್ಷ ಎಜಾಜ್ ಅಲಿಯ ನಿಕಟವರ್ತಿ ಎಂದು ತಿಳಿದು ಬಂದಿದೆ.

ಉಡುಪಿಯಲ್ಲೂ ಪಿಎಫ್ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಾಲ್ವರು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಹೂಡೆ ಪಿಎಫ್ಐ ಮುಖಂಡ ಇಲ್ಯಾಸ್ ಹೂಡೆ, ಕುಂದಾಪುರದ ಆಶಿಕ್ ಕೋಟೆಶ್ವರ, ಗಂಗೊಳ್ಳಿ ರಜಾಬ್ ಹಾಗೂ ಬೈಂದೂರಿನ ಖಲೀಲ್ ಸೈಯದ್‌ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಎನ್ಐಎ ದಾಳಿ ವಿರೋಧಿಸಿ ರಾಮನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪಿಎಫ್ಐ ಕಾರ್ಯಕರ್ತರ ಮನೆ ಮೇಲೆ ತಡರಾತ್ರಿ ಏಕಾಏಕಿ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ 10 ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರ ಬಂಧನ ಮಾಡಿದ್ದಾರೆ. ಈ ಕುರಿತು ಐಜೂರು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.