ಮಡಿಕೇರಿ: ಪೋನ್ನಂಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅರಣ್ಯ ರಕ್ಷಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಅರಣ್ಯ ರಕ್ಷಕ ತರುಣ್ (23) ಮೃತ ದುರ್ದೈವಿ.
ಅರಣ್ಯದಲ್ಲಿ ಬೀಟ್ ಹೋಗಿದ್ದಾಗ ನಾಪತ್ತೆಯಾಗಿದ್ದ ತರುಣ್ ಬಾಡಗ ಗ್ರಾಮದ ಕೊಕ್ಕದಲ್ಲಿರುವ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯದಲ್ಲಿ ಸಹೋದ್ಯೋಗಿಗಳ ಜೊತೆಗೆ ಬೀಟ್ ಗೆ ಹೋಗಿರುವ ಸಂದರ್ಭದಲ್ಲಿ ಬರೋಪೋಳೆ ನದಿಯ ಸಮೀಪದಲ್ಲಿ ಕಾಲು ಜಾರಿ ಬಿದ್ದಿರುವ ಬಗ್ಗೆ ತರುಣ್ ಸಹೋದ್ಯೋಗಿಗಳು ಮಾಹಿತಿ ನೀಡಿದ್ದರು.
ಇದರ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ನುರಿತ ಮುಳುಗು ತಜ್ಞರ ತಂಡ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ಮೃತದೇಹ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.