51.57 ಲಕ್ಷ ರೂ. ಲಾಭಗಳಿಸಿದ ಗುರುಕೃಪಾ ಸಹಕಾರಿ ಬ್ಯಾಂಕ್: ಷೇರುದಾರರಿಗೆ ಶೇ. 6 ರಷ್ಟು ಲಾಭಾಂಶ ನೀಡಲು ನಿರ್ಧಾರ

ಭಟ್ಕಳ: ತಾಲೂಕಿನ ಗುರುಕೃಪಾ ಸಹಕಾರಿ ಬ್ಯಾಂಕ್ ಕಳೆದ ಸಾಲಿನಲ್ಲಿ 51.57 ಲಕ್ಷ ನಿವ್ವಳ ಲಾಭ ಗಳಿಸಿದೆ. ಇದರ ಹಿನ್ನೆಲೆಯಲ್ಲಿ ಈ ಬಾರಿ ಷೇರುದಾರರಿಗೆ ಶೇ. 6 ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮೋಹನ ನಾಯ್ಕ ಹೇಳಿದರು. ಅವರು ಪಟ್ಟಣದ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ 24 ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಮಾತನಾಡಿದರು.

ಬ್ಯಾಂಕು ಆರ್ಥಿಕವಾಗಿ ಉನ್ನತ ಮಟ್ಟಕ್ಕೆ ಏರುತ್ತಿದೆ. ಕಳೆದ ಸಾಲಿನಲ್ಲಿ 29.69 ಕೋಟಿ ಠೇವಣಿ ಸಂಗ್ರಹಿಸಿ 25.37 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳ 37.19 ಕೋಟಿ ಇದ್ದು, 3.37 ಕೋಟಿ ಸ್ವಂತ ಬಂಡವಾಳ ಹೊಂದಿದೆ. ಅಲ್ಲದೇ ಬ್ಯಾಂಕ್ ಆರ್ಥಿಕವಾಗಿ ಸುಭದ್ರವಾಗಿದೆ ಎಂದರು.

ಬ್ಯಾಂಕಿನ ವ್ಯವಹಾರವನ್ನು ವಿಸ್ತರಿಸಿ ಮಂಕಿ ಚಿತ್ತಾರ ಹಾಗೂ ಸರ್ಪನಕಟ್ಟೆಯಲ್ಲಿ ನೂತನ ಶಾಖೆ ತೆರೆಯಲಾಗಿದೆ. ಗ್ರಾಹಕರು ಅಲ್ಲಿಯೂ ಕೂಡ ಸಹಕಾರ ನೀಡುವಂತೆ ಕೋರಿಕೊಂಡರು. ಸ್ಪರ್ಧಾತ್ಮಕ ವ್ಯವಹಾರ ದೃಷ್ಠಿಯಿಂದ ಬ್ಯಾಂಕಿನ ಚಿನ್ನಾಭರಣ ಹಾಗೂ ವಾಹನ ಸಾಲದ ಮೇಲೆ ಶೇ. 1 ರಷ್ಟು ಬಡ್ಡಿ ಕಡಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಲಗಳ ಮೇಲೆ ಬಡ್ಡಿ ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ.

ಮುಖ್ಯ ಕಾರ್ಯನಿರ್ವಾಹಕ ವಾಸು ನಾಯ್ಕ ವರದಿ ವಾಚಿಸಿದರು. ಉಪಾಧ್ಯಕ್ಷ ನಾರಾಯಣ ನಾಯ್ಕ, ನಿರ್ದೇಶಕರಾದ ಸುರೇಶ ನಾಯ್ಕ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ, ಕುಮಾರ ನಾಯ್ಕ ಹಾಗೂ ಮತ್ತಿತರು ಉಪಸ್ಥಿತರಿದ್ದರು.