ಜಮ್ಮುಕಾಶ್ಮೀರ: ಕಾಂಗ್ರೆಸ್ ತೊರೆದು ಒಂದು ತಿಂಗಳ ಬಳಿಕ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸೋಮವಾರ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ. ಹೊಸ ಪಕ್ಷದ ಹೆಸರು ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಹೇಳಿದ್ದಾರೆ.
ನಮ್ಮ ಪಕ್ಷಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಆಜಾದ್ ಹೇಳಿದ್ದಾರೆ. ಯುವಕರು ಮತ್ತು ಹಿರಿಯರು ಈ ಪಕ್ಷವನ್ನು ಸಹಬಾಳ್ವೆಯಿಂದ ನಡೆಸುತ್ತಾರೆ ಎಂದಿದ್ದಾರೆ. ಆಜಾದ್ ಅವರು ಆ. 26 ರಂದು ಕಾಂಗ್ರೆಸ್ ರಾಜೀನಾಮೆ ನೀಡಿದ್ದರು. ಪಕ್ಷದ ಹೆಸರು ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸಿದ್ದೇವೆ ಎಂದು ಆಜಾದ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಾಸಿವೆ, ಬಿಳಿ ಮತ್ತು ನೀಲಿ ಮೂರು ಬಣ್ಣಗಳನ್ನು ಹೊಂದಿರುವ ಪಕ್ಷದ ಧ್ವಜವನ್ನು ಸಹ ಆಜಾದ್ ಬಿಡುಗಡೆ ಮಾಡಿದ್ದಾರೆ. ಸಾಸಿವೆ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ, ಬಿಳಿ ಶಾಂತಿಯನ್ನು ಸೂಚಿಸುತ್ತದೆ ಮತ್ತು ನೀಲಿ ಸ್ವಾತಂತ್ರ್ಯ, ಮುಕ್ತ ಸ್ಥಳ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗಿನ ಮಿತಿಗಳನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.