ಸ್ವತಃ ಕಸದ ವಾಹನ ಚಲಾಯಿಸಿ, ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿದ ಸಿಇಓ: ಮಾದರಿ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ.!

ಉಡುಪಿ: ಗ್ರಾಮಗಳ ಅಭಿವೃದ್ಧಿಯ ಜೊತೆಗೆ ಇಡೀ ಜಿಲ್ಲೆಯ ಹಳ್ಳಿಗಳ ನಿರ್ವಹಣೆಯ ನಿಗಾ ವಹಿಸುವುದು ಸಿಇಓ ಕೆಲಸ. ಆದರೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೆಗಳಿಂದ ಖುದ್ದು ಕಸ ಸಂಗ್ರಹಿಸಿ ಇಡೀ ರಾಜ್ಯವೇ ಆಶ್ಚರ್ಯ ಪಡುವ ಕೆಲಸವೊಂದನ್ನು ಮಾಡಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಓ ಹೆಚ್. ಪ್ರಸನ್ನ ಬೆಳ್ಳಂಬೆಳಗ್ಗೆ ಬಿಳಿ ಟಿ ಷರ್ಟ್ ತೊಟ್ಟು ಕಸ ಸಂಗ್ರಹಿಸುವ ಗಾಡಿ ಏರಿ ಬಡಗಬೆಟ್ಟು ಗ್ರಾ. ಪಂ ವ್ಯಾಪ್ತಿಯ ಮನೆಗಳಿಂದ ಕಸ ಸಂಗ್ರಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೇ ತಾವೇ ಕಸದ ವಾಹನ ಚಲಾವಣೆ ಮಾಡಿಕೊಂಡು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಸ್ವಚ್ಛ ಭಾರತ್ ಅಭಿಯಾನದ ಮಹತ್ವವನ್ನು ಸಾರಿ ಜನರಲ್ಲಿ ಕಸ ನಿರ್ವಹಣೆ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ.

ಸ್ವಚ್ಛ ಭಾರತ್ ಯೋಜನೆ ಮೂಲಕ ಸರ್ಕಾರ ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ ಗಳಿವೆ. ಅವುಗಳಲ್ಲಿ 140 ಗ್ರಾ. ಪಂನ ಶೇ. 80 ರಷ್ಟು ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ದೇಶಾದ್ಯಂತ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯುತ್ತಿದ್ದು, ಇದರ ಹಿನ್ನೆಲೆಯಲ್ಲಿ ಜನರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅಕ್ಟೋಬರ್ 2 ರ ಒಳಗಾಗಿ ಶೇ. 20 ರಷ್ಟು ಮನೆಗಳ ಮನ ಒಲಿಸುವ ಜವಾಬ್ದಾರಿ ನೀಡಲಾಗಿದೆ ಎಂದು ಸಿಇಓ ಹೇಳಿದ್ದಾರೆ.

ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಕಸ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಅವರೆಲ್ಲರಿಗೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಮತ್ತು ಕಸ ಸಂಗ್ರಹದ ಸಂದರ್ಭದಲ್ಲಿ ಎದುರಿಸುವ ಸವಾಲುಗಳು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಈ ಅಭಿಯಾನ ಸಹಕಾರಿಯಾಗಿದೆ ಎಂದು ಜಿ. ಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂನ ಸದಸ್ಯರು, ಪಿಡಿಒ, ಸ್ಥಳೀಯ ಅಧಿಕಾರಿಗಳು ಹಾಗೂ ಇತರರು ಭಾಗಿಯಾಗಿದ್ದರು.