ಶಿವಮೊಗ್ಗ: ಶಂಕಿತ ಉಗ್ರರ ಬಂಧನ ಪ್ರಕರಣವು ಎಲ್ಲ ದಿಕ್ಕಿನಿಂದಲೂ ಚುರುಕುಗೊಂಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಂಕಿತ ಉಗ್ರರಿಗೆ ಕರಾವಳಿ ಹಾಗೂ ಕೇರಳದೊಂದಿಗೆ ಸಂಪರ್ಕ ಇರುವುದರಿಂದ ಇಂತಹ ಕೃತ್ಯ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಸ್ಯಾಟ್‌ಲೈಟ್ ಫೋನ್ ಬಳಕೆ ಸಹ ಆಗಿರುವುದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕಿದೆ ಎಂದರು.
ಶಂಕಿತ ಉಗ್ರರದ್ದು ತೀರ್ಥಹಳ್ಳಿ ಮೂಲವಾಗಿದ್ದರೂ ಹೆಚ್ಚಿನ ನಂಟು ಮಂಗಳೂರಿನದ್ದಾಗಿದೆ. ಅಲ್ಲಿ ಮತಾಂಧರ ಪರಿಚಯದಿಂದ ಈ ರೀತಿಯ ಕೃತ್ಯಗಳು ನಡೆದಿದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳ ಕೂಡ ತನಿಖೆ ಕೈಗೊಂಡಿದೆ. ಸರಿಯಾದ ಸಮಯದಲ್ಲಿ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿರುವುದರಿಂದ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.