ಬೀದಿ ನಾಯಿಗಳನ್ನು ಹಿಡಿದು ಕಾಡಿಗೆ ಬಿಟ್ಟು ಎಡವಟ್ಟು.! ಪ್ರಾಣಿ ಪ್ರಿಯರಿಂದ ವಿರೋಧ.!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,533 ಜನ ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದೆ. ಇದರ ಭಾಗವಾಗಿ ಖಾಸಗಿಯವರೊಂದಿಗೆ ಸ್ಥಳೀಯ ಆಡಳಿತ ಬೀದಿ ನಾಯಿಗಳನ್ನ ಹಿಡಿದು ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದೆ.

ಆದ್ರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಪುರಸಭೆಯ ಸಿಬ್ಬಂದಿಗಳು ಮಾತ್ರ ಬೀದಿನಾಯಿಗಳನ್ನು ಹಿಡಿಯುವುದರಲ್ಲಿ ರಾಕ್ಷಸತನ ತೋರಿದ್ದಾರೆ. ಹೌದು.! ಹಳಿಯಾಳ ನಗರದಲ್ಲಿ ಬೀದಿ ಬೀದಿಗಳನ್ನು ಜಾಲಾಡಿದ ಪುರಸಭೆ ಸಿಬ್ಬಂದಿ ಬೇಕಾಬಿಟ್ಟಿ ಹಿಂಸಾತ್ಮಕ ರೀತಿಯಲ್ಲಿ ಹಿಡಿದಿದ್ದಾರೆ. ಇನ್ನೂರಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿದ ಪುರಸಭೆ ಸಿಬ್ಬಂದಿಗಳು ಮಾಡಿದ್ದ ಕೆಲಸ ಮಾತ್ರ ಎಡವಟ್ಟಿನದ್ದು.

ಹಿಂಸಾತ್ಮಕವಾಗಿ ಹಿಡಿದು ಹಳಿಯಾಳದಿಂದ ಯಲ್ಲಾಪುರ ಭಾಗದ ಕಾಡಿನಲ್ಲಿ 80 ಕ್ಕೂ ಹೆಚ್ಚು ನಾಯಿಗಳನ್ನು ತಂದು ಬಿಟ್ಟಿದ್ದಾರೆ. ಈ ಭಾಗದಲ್ಲಿ ಹೆಚ್ಚು ಕಾಡು ಇದ್ದು, ಚಿರತೆ, ಹುಲಿಗಳಿವೆ. ಹೀಗೆ ಬೇಕಾಬಿಟ್ಟಿ ಕಾಡಿನಲ್ಲಿ ಬಿಟ್ಟಿದ್ದರಿಂದ ಇದೀಗ ಬೀದಿ ನಾಯಿಗಳಿಗೆ ಆಹಾರವಿಲ್ಲದೇ ಸಾಯುವ ಆತಂಕವಿದ್ದರೆ, ಕಾಡುಪ್ರಾಣಿಗಳಿಗೆ ಸುಲಭವಾಗಿ ಆಹಾರವಾಗುತ್ತಿವೆ.

ಪುರಸಭೆ ಸಿಬ್ಬಂದಿಗಳು ಮಾಡಿದ ಅಚಾತುರ್ಯದ ಕೆಲಸಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಳಿಯಾಳದ ಮಾತೃಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಕೆ ಯೋಗರಾಜ್ ಪುರಸಭೆ ಸಿಬ್ಬಂದಿಗಳ ಅಮಾನುಷ ವರ್ತನೆಯ ವಿರುದ್ಧ ದೂರು ನೀಡಿದ್ದಾರೆ. ಇದಲ್ಲದೇ ಪಶುಸಂಗೋಪನಾ ಇಲಾಖೆಯಿಂದಲೂ ಪುರಸಭೆ ಸಿಬ್ಬಂದಿ ಕೃತ್ಯಕ್ಕೆ ನೋಟಿಸ್ ಜಾರಿಮಾಡಿದ್ದು, ಇದೀಗ ಹಳಿಯಾಳ ತಾಲೂಕಿನಲ್ಲಿ ಪುರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ವಿರೊಧ ವ್ಯಕ್ತವಾಗಿದೆ.