ಮನಮೋಹನ್ ಸಿಂಗ್ ಅಸಾಧಾರಣ ವ್ಯಕ್ತಿ.! ಆದರೆ.?

ಗುಜರಾತ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಒಬ್ಬ ಅಸಾಧಾರಣ ವ್ಯಕ್ತಿ. ಆದರೆ ಅವರ ಕೈಯಲ್ಲೇ ಅಧಿಕಾರವಿದ್ದರೂ ಯುಪಿಎ ಆಡಳಿತದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್ ನಲ್ಲಿ ನಡೆದ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಮತ್ತು ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿತ್ತು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಓರ್ವ ಅಸಾಧಾರಣ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.

ಇನ್ನು ನಾನು ಲಂಡನ್‌ನಲ್ಲಿ ಎಚ್‌ಎಸ್‌ಬಿಸಿಯ ಬೋರ್ಡ್‌ನಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ ಬೋರ್ಡ್‌ರೂಮ್‌ನಲ್ಲಿ ಚೀನಾವನ್ನು ಎರಡರಿಂದ ಮೂರು ಬಾರಿ ಪ್ರಸ್ತಾಪಿಸಿದಾಗ ಭಾರತದ ಹೆಸರು ಒಮ್ಮೆ ಮಾತ್ರ ಬರುತ್ತಿತ್ತು ಎಂದರು. ಆದರೆ ಇಂದು ವಿಶ್ವದಲ್ಲಿ ಭಾರತದ ಬಗ್ಗೆ ಅಪಾರ ಗೌರವ ಮೂಡಿದ್ದು, ದೇಶ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.