ಭಟ್ಕಳ: ಆಸರಕೇರಿ ನಿಚ್ಚಲಮಕ್ಕಿ ದೇವಸ್ಥಾನದ ದ್ವಾರ ನಿರ್ಮಾಣ ಸಂಬಂಧ ಪಟ್ಟ ವಿಚಾರದಲ್ಲಿ ಶಾಸಕ ಸುನೀಲ ನಾಯ್ಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂಬ ತಂಜೀಂ ಸಂಸ್ಥೆ ಹೇಳಿಕೆಗೆ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ್ ದೇವಾಡಿಗ ತಿರುಗೇಟು ನೀಡಿದ್ದಾರೆ.
ಅವರು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕ್ಷುಲ್ಲಕ ರಾಜಕಾರಣ ಮಾಡುತ್ತೀರಿರುವುದು ಶಾಸಕರಲ್ಲ ತಂಜೀಂ ಸಂಸ್ಥೆ. ಶಾಸಕರು ಇದೇ ಮೊದಲ ಬಾರಿಗೆ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮಾಡುತ್ತಿರುವುದಲ್ಲ. ಅವರು ಈಗಾಗಲೇ ಅವರ ವಿಧಾನಸಭಾ ಕ್ಷೇತ್ರದ ಕಿತ್ರೆ ಮಾರುಕೇರಿ ದೇವಸ್ಥಾನ, ಗುಣವಂತೆ ಶಂಭುಲಿಂಗೇಶ್ವರ ದೇವಸ್ಥಾನ, ಮಂಕಿ ತಾಳಮಕ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಚಿತ್ತಾರ ಜಿನ್ನೋಡ ದೇವಸ್ಥಾನ, ಕಾಸರಗೋಡ ಅಪ್ಸರಗೊಂಡ ದೇವಸ್ಥಾನ ಹಾಗೂ ಸದ್ಯ ನಿರ್ಮಾಣ ಹಂತದಲ್ಲಿದ್ದ ಆಸರಕೇರಿ ದೇವಸ್ಥಾನ ಹೀಗೆ ಇವೆಲ್ಲ ಕಡೆಗಳಲ್ಲಿ ತಮ್ಮ ವೈಯಕ್ತಿಕ ವೆಚ್ಚದಲ್ಲಿ ದೇವಸ್ಥಾನದ ಮಹಾದ್ವಾರ ನಿರ್ಮಾಣ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಆ ಭಾಗಗಳಲ್ಲಿ ಯಾವುದೇ ವಿರೋಧ ಕಂಡುಬಂದಿಲ್ಲ ಆದರೆ ಆಸರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಮಹಾದ್ವಾರದ ನಿರ್ಮಾಣದಲ್ಲಿ ಮಾತ್ರ ಯಾಕೆ ವಿರೋಧ ಬಂದಿದೆ.
ಕಾಮಗಾರಿಯ ಗುದ್ದಲಿ ಪೂಜೆಯಾದರೂ ವಿರೋಧ ಮಾಡಿಲ್ಲ, ಕಾಮಗಾರಿ ಕಾಮಗಾರಿ ಆರಂಭವಾದಾಗಲೂ ವಿರೋಧ ಮಾಡಿಲ್ಲ, ಕಾಮಗಾರಿ ಆರಂಭವಾಗಿ ಶೇಕಡಾ 20 ರಿಂದ 30 ರಷ್ಟು ಕಾಮಗಾರಿ ಆದ ಮೇಲೆ ವಿರೋಧ ಆರಂಭವಾಗಿದೆ. ಅದು ವಿರೋಧ ಹೇಗೆ ಮಾಡಿದ್ದಾರೆ ಎಂದರೆ ದೇವಸ್ಥಾನಕ್ಕೆ ಹೋಗುವ ಇನ್ನೊಂದು ದಾರಿಯಲ್ಲಿ ಟಿಪ್ಪು ಗೇಟ್ ನಿರ್ಮಾಣ ಮಾಡುತ್ತೇವೆ ಎನ್ನುವ ಮೂಲಕ ಒಂದಷ್ಟು ಜನ ವಿರೋಧ ಮಾಡಲು ಆರಂಭಿಸಿದರು. ತಂಜೀಂ ಸಂಸ್ಥೆ ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿ ಅವರ ಬೆಂಬಲಿತ ಸದಸ್ಯರೇ ಇದಕ್ಕೆ ಅಡ್ಡಗಾಲು ಹಾಕಿದ್ದಾರೆ. ನೀವು ಕಾನೂನು ರೀತಿಯಲ್ಲಿ ಅನುಮತಿ ಪಡೆದು ಮಹಾದ್ವಾರ ಮಾಡಿ. ಇಲ್ಲದೆ ಹೋದರೆ ನಾವು ಟಿಪ್ಪು ಗೇಟ್ ನಿರ್ಮಾಣಮಾಡುತ್ತೇವೆ ಎನ್ನುತ್ತಾರೆ.
ಶಾಸಕರ ಮೇಲೆ ತಂಜೀಂ ಸಂಸ್ಥೆಗೆ ಏಕೆ ಕೋಪ.?
ಪುರಸಭೆಗೆ ಈ ಹಿಂದೆ ಬಂದ ಅನುದಾನವನ್ನು ಕೇವಲ ತಂಜೀಂ ಸಂಸ್ಥೆ ಬೆಂಬಲಿತ ಮುಸ್ಲಿಂ ಅಭ್ಯರ್ಥಿಗಳ ವಾರ್ಡಗಳಿಗೆ ಮಾತ್ರ ಹೆಚ್ಚು ವಿನಿಯೋಗ ಮಾಡುತ್ತಿದ್ದರು. ಆದರೆ ಹಿಂದೂ ಅಭ್ಯರ್ಥಿಗಳ ವಾರ್ಡಗಳಲ್ಲಿ ಅನುದಾನ ಬಿಡುಗಡೆ ಆಗುತ್ತಿರಲಿಲ್ಲ. ಈಗ ಶಾಸಕರು ಅಧಿಕಾರಿಗಳಿಗೆ ಸರಿಯಾದ ಸೂಚನೆ ನೀಡಿ, ಎಲ್ಲಿಯೂ ತಾರತಮ್ಯ ಆಗದಂತೆ ಎಲ್ಲಾ ಕಡೆಗಳಲ್ಲಿ ಸಮನಾಗಿ ಹಂಚುವಂತೆ ಹೇಳಿರುವುದು ನಿಮಗೆ ಶಾಸಕ ಮೇಲೆ ಕೋಪ ಬರಲು ಕಾರಮವಾಗಿದೆಯಾ.? ಅಥವಾ ಪುರಸಭೆಗೆ ಅನಧಿಕೃತವಾಗಿ ಅಳವಡಿಸಿದ ಉರ್ದು ನಾಮಫಲಕವನ್ನು ಸರ್ಕಾರದ ಮುಖಾಂತರ ಶಾಸಕರು ತೆರವುಗೊಳಿಸಿದ್ದರು.ಅದರಿಂದ ನಿಮಗೆ ಶಾಸಕರ ಮೇಲೆ ಆಕ್ರೋಶ ಬಂದಿದೆಯಾ.? ಅಥವಾ ಹಲವಾರು ವರ್ಷಗಳಿಂದ ಪರಿಹಾರ ಆಗದೆ ಇರುವ ನಾಗಬನ ಸಮಸ್ಯೆಯನ್ನು ಪರಿಹಾರ ಕಂಡುಕೊಂಡಾಗ ಆ ವೇಳೆಯಲ್ಲೂ ಕೂಡಾ ಕೆಲವರು ಗಲಾಟೆ ಮಾಡಿದ್ದರು. ಇದರಿಂದ ಶಾಸಕರ ಮೇಲೆ ಕೋಪ ಬಂದಿದೆಯಾ.? ಯಾವ ಕಾರಣಕ್ಕೆ ಶಾಸಕರ ಮೇಲೆ ನಿಮಗೆ ಆಕ್ರೋಶ ಎಂದು ನೀವೇ ತಿಳಿಸಬೇಕು. ಶಾಸಕರು ಯಾವತ್ತೂ ಕ್ಷುಲ್ಲಕ ರಾಜಕಾರಣ ಮಾಡಿಲ್ಲ. ಅವರು ಅಭಿವೃದ್ಧಿ ಪರವಾದ ರಾಜಕಾರಣ ಮಾಡಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷದ ಹೈಕಮಾಂಡ್ ತಂಜೀಂ ಸಂಸ್ಥೆ ಅಲ್ಲ
ಶಾಸಕರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ
ಎಂಬುದು ನಮ್ಮ ಪಕ್ಷಕ್ಕೆ ಸಂಬಂಧ ಪಟ್ಟ ವಿಷಯ. ಅದು ನಮ್ಮ ಪಕ್ಕ ತೀರ್ಮಾನ ಮಾಡುತ್ತದೆ. ಇದಕ್ಕೂ ತಂಜೀಂ ಸಂಸ್ಥೆಗೆ ಯಾವ ರೀತಿ ಸಂಬಂಧವಿಲ್ಲ. ಭಾರತೀಯ ಜನತಾ ಪಕ್ಷದ ಹೈಕಮಾಂಡ್ ತಂಜೀಂ ಸಂಸ್ಥೆ ಅಲ್ಲ ಎಂದ ಅವರು ಭಾರತೀಯ ಜನತಾ ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡುವ ಅರ್ಹತೆ ತಂಜೀಂ ಸಂಸ್ಥೆಗಿಲ್ಲ. ಇದನ್ನು ನಾವು ಉಗ್ರವಾಗಿ ಖಂಡನೆ ಮಾಡುತ್ತೇವೆ ಎಂದರು.
ಎನ್.ಐ.ಎ ಕಾರ್ಯಾಚರಣೆಗೆ ಭಟ್ಕಳ ಬಿಜೆಪಿ ಮಂಡಲದಿಂದ ಶ್ಲಾಘನೆ
ಎನ್.ಐ.ಎ ಸಂಸ್ಥೆ ನಿನ್ನೆ ದೇಶದ 15 ರಾಜ್ಯಗಳಲ್ಲಿ ಒಟ್ಟು 93 ಕಡೆಗಳಲ್ಲಿ ಒಂದೇ ದಿನ ಕಾರ್ಯಾಚರಣೆ ಮಾಡಿ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಗೆ ಸಂಬಂಧ ಪಟ್ಟ 93 ಜನರನ್ನು ಬಂಧನ ಮಾಡಿದ್ದಾರೆ. ಎನ್.ಐ. ಎ ಸಂಸ್ಥೆ ಕೇವಲ ಒಂದೇ ದಿನದಲ್ಲಿ ತನಿಖೆ ಮಾಡಿ ದಾಳಿ ಮಾಡುವುದಿಲ್ಲ. ಸರಿಯಾದ ಮಾಹಿತಿ ಪಡೆದುಕೊಂಡು ದಾಖಲೆಗಳನ್ನು ಕಲೆಹಾಕಿ ದಾಳಿ ಮಾಡಿದ್ದಾರೆ. ಈ ಕಾರ್ಯಾಚರಣೆಗೆ ಭಟ್ಕಳ ಬಿಜೆಪಿ ಮಂಡಲ ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತದೆ ಎಂದ ಅವರು ಇನ್ನು ಹೆಚ್ಚಿನ ದೇಶದ್ರೋಹಿಗಳು ಉಳಿದುಕೊಂಡಿದ್ದಾರೆ. ಅವರನ್ನು ಕೂಡಾ ಕಾರ್ಯಾಚರಣೆ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸುತ್ತೇವೆ ಮತ್ತು ಇದಕ್ಕೆ ವಿರುದ್ಧವಾಗಿ ಯಾವುದೇ ಸಂಘನೆಗಳು ಪ್ರತಿಭಟನೆ ಮಾಡಿದರೆ ಅಧಿಕಾರಿಗಳು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿವಾನಿ ಶಾಂತರಾಮ, ಮೋಹನ ನಾಯ್ಕ, ಶ್ರೀಕಾಂತ ನಾಯ್ಕ, ದಿನೇಶ ನಾಯ್ಕ ಮಂಜುನಾಥ ನಾಯ್ಕ, ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು