ಪಿ.ಎಫ್.ಐ ಮುಖಂಡರ ಬಂಧನ ಖಂಡಿಸಿ ಭಟ್ಕಳದಲ್ಲಿ ರಸ್ತೆ ತಡೆ ಪ್ರಯತ್ನ

ಭಟ್ಕಳ: ರಾಷ್ಟ್ರೀಯ ತನಿಖಾ ಸಂಸ್ಥೆ ಪಿ.ಎಫ್.ಐ ಮುಖಂಡರ ಬಂಧನ ಖಂಡಿಸಿ ಭಟ್ಕಳ ಪಿ.ಎಫ್.ಐ ಸಂಘಟನೆ ವತಿಯಿಂದ ಗುರುವಾರ ಪ್ರವಾಸಿ ಮಂದಿರದ ಎದುರು ಪ್ರತಿಭಟನೆ ನಡೆಯಿತು.

ದೇಶಾದ್ಯಂತ 10 ರಾಜ್ಯಗಳಲ್ಲಿ ಇಂದು ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಪಿ.ಎಫ್.ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಬೆಹಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಂತರ ಏಕಾಏಕಿ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿ ತಡೆಯಲು ಪ್ರಯತ್ನಿಸಿದರು. ನಂತರ ಪೊಲೀಸರು ರಸ್ತೆ ತಡೆದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇದೇ ವೇಳೆ ಪೊಲೀಸರಿಗೂ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ಗೋ ಬ್ಯಾಕ್ ಗೋ ಬ್ಯಾಕ್, ಎನ್.ಐ. ಎ ಗೋ ಬ್ಯಾಕ್, ಹೇಡಿ ಸಾವರ್ಕರ್ ಮಕ್ಕಳು ಸೇರಿದಂತೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಮಿತ್ ಶಾ, ಆರ್.ಎಸ್.ಎಸ್, ಸಂಘ ಪರಿವಾರಕ್ಕೆ ಮುರ್ದಾ ಬಾದ್ ಘೋಷಣೆ ಕೂಗಿದರು. “ತಬ್ ಗವರ್ನಮೆಂಟ್ ಡರ್ ಥೇ ಹೈ ತಬ್ ಎನ್.ಐ.ಎ ಸಾಮನೇ ಅತೆ ಹೈ ಎಂಬ ಘೋಷಣೆ ಪದೇ ಪದೇ ಕೂಗಿದರು. ಜೊತೆಗೆ ದೇಶಕ್ಕಾಗಿ ಪಿ ಎಫ್ ಐ ಹೂವಿನಂತೆ. ಆರ್ ಎಸ್ ಎಸ್ ನವರಿಗೆ ಪಿ ಎಫ್ ಐ ಬೆಂಕಿಯಂತೆ ಎಂದು ಘೋಷಣೆ ಕೂಗಿದರು.

ನಂತರ ಪಿ.ಎಫ್.ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಬೆಹಟ್ಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಇದು ನಮ್ಮ ಸಾಂಕೇತಿಕ ಹೋರಾಟ ಮುಂದಿನ ದಿನಗಳಲ್ಲಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಸ್ಥಳದಲ್ಲಿ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಅಬ್ದುಲ್ ಜಮಾನ್ ಬೆಂಗಾಲಿ, ತನ್ವೀರ್, ಅಕೀಫ್, ಹೊನ್ನಾವರದ ಮಕಸೂದ್ ಸೇರಿ 7 ಪಿ.ಎಪ್.ಐ ಸಂಘಟನೆ ಸದಸ್ಯರು ಹಾಜರಿದ್ದರು. ಹಾಗೂ ಭಟ್ಕಳದ 25 ಪಿ.ಆಫ್.ಐ ಸದಸ್ಯರು ಇದ್ದರು