ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಸ್ಪರ್ದೆ ಇಲ್ಲ- ಅಶೋಕ್ ಗೆಹ್ಲೋಟ್

ಕೇರಳ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದ ಯಾರೂ ಸ್ಪರ್ದಿಸುವುದಿಲ್ಲ ಎಂದು ಅಶೋಕ್ ಗೆಹ್ಲೋಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ನಿನ್ನೆ ಕೇರಳದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಹುಲ್ ಜೊತೆ ಮಾತುಕತೆ ನಡೆಸಿದ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಎಲ್ಲರೂ ಒತ್ತಾಯ ಮಾಡುತ್ತಿದ್ದಾರೆ ಎಂದು ರಾಹುಲ್ ಬಳಿ ಹೇಳಿದೆ. ನೀವೇ ಅಧ್ಯಕ್ಷರಾಗಿ ಎಂದು ಹಲವಾರು ಬಾರಿ ವಿನಂತಿಸಿದೆ. ಆದರೆ ಅವರು ಒಪ್ಪಿಲ್ಲ, ಇದೀಗ ಗಾಂಧಿ ಕುಟುಂಬದ ಯಾರೂ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗಬಾರದು ಎಂದು ಅವರು ನಿರ್ಧರಿಸಿದ್ದಾರೆ ಎಂದು ಅವರು ನನಗೆ ಹೇಳಿದರು ಎಂದು ಅಶೋಕ್ ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.