‘ಭಾರತ್ ಜೋಡೋ’ ಯಾತ್ರೆ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

ಮೈಸೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ನಗರದ ಕಾಂಗ್ರೆಸ್‌ ಭವನದ ಆವರಣದಲ್ಲಿ ನಡೆದ ಭಾರತ್‌ ಜೋಡೋ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾರ್ಥಕ್ಕಾಗಿ ಅಥವಾ ಅಧಿಕಾರಕ್ಕಾಗಿ ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುತ್ತಿಲ್ಲ. ಸಾಮಾನ್ಯ ಜನರ ಪರವಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಹಾಳು ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಇಲ್ಲದಂತಾಗಿದೆ. ಕೆಲಸಕ್ಕೆ ಲಂಚ ಕೊಡಬೇಕು. ಬೆಲೆ ಏರಿಕೆ. ಸಾಮಾನ್ಯ ಜನರು ಬದುಕಲಾಗದ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ಅರಿತು ರಾಹುಲ್‌ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದರು.

ಇನ್ನು ರಾಹುಲ್‌ ಗಾಂಧಿ ಮೈಸೂರು- ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಿದರೆ ರಾಜಕೀಯ ಲಾಭ ಆಗುತ್ತದೆ. ಈ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೊಳಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕಿಂತ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಹೇಳಿದರು. ನಮ್ಮ ಪಕ್ಷದಿಂದ ಮೇಕೆದಾಟು, ಬಳ್ಳಾರಿ ಪಾದಯಾತ್ರೆ ಸೇರಿದಂತೆ ಸಾಕಷ್ಟುಪಾದಯಾತ್ರೆ ಮಾಡಿದ್ದೇವೆ. ರಾಜ್ಯದಲ್ಲಿ 510 ಕಿ.ಮೀ ಪಾದಯಾತ್ರೆ ಸಾಗುತ್ತದೆ. ಕಾರ್ಯಕರ್ತರು ಒಂದು ದಿನ ನಡೆಯಲೇ ಬೇಕು ಎಂದು ಅವರು ಹೇಳಿದರು.