ಶಿಕ್ಷಕ ಹಾಗೂ ಅಕ್ಷರ ದಾಸೋಹ ಅಧಿಕಾರಿ ನಡುವೆ ಮಾರಾಮಾರಿ.! ಶಿಕ್ಷಕನ ಕೈ ಮುರಿತ, ಅಧಿಕಾರಿ ತಲೆಗೆ ಗಂಭೀರ ಗಾಯ.!

ಹಾಸನ: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ಮತ್ತು ಅಕ್ಷರ ದಾಸೋಹ ಅಧಿಕಾರಿ ನಡುವೆ ಹೊಡೆದಾಟವಾಗಿ ಇಬ್ಬರೂ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಶನಿವಾರ ನಡೆದಿದೆ. ಶಿಕ್ಷಕ ಗಿರಿಜಾನಾಥ ಮುಂಬಾಳೆ ಹಾಗೂ ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್ ಪರಸ್ಪರ ಹೊಡೆದಾಡಿ ಗಾಯಗೊಂಡವರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಶಿಕ್ಷಕರಿಗೆ ಕ್ಲಸ್ಟರ್ ಮಟ್ಟದ ತರಬೇತಿ ಕಾರ್ಯಗಾರ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್ ತರಬೇತಿ ನೀಡುತ್ತಿರುವಾಗ ಮಧ್ಯ ಪ್ರವೇಶಿಸಿದ ಶಿಕ್ಷಕ ಗಿರಿಜಾನಾಥ ಮುಂಬಾಳೆ ನೀವು ಭೋದಿಸುತ್ತಿರುವ ವಿಷಯದ ಲೆಕ್ಕ ತಪ್ಪಿದೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಿವಕುಮಾರ್ ಬೋರ್ಡ್‌ನಲ್ಲಿ ಲೆಕ್ಕ ಬರೆದಿದ್ದೇನೆ ನೀವು ಉತ್ತರ ಕಂಡುಕೊಳ್ಳಬಹುದು ಎಂದಿದ್ದಾರೆ. ಇದರಿಂದ ಕೋಪಗೊಂಡ ಗಿರಿಜಾನಾಥ ಮುಂಬಾಳೆ ತರಬೇತಿ ಕೇಂದ್ರದಿಂದ ಹೊರ ನೆಡೆದಿದ್ದಾರೆ.

ಈ‌ ವಿಷಯದ ಕುರಿತಾಗಿ ಶಿವಕುಮಾರ್ ಬಿಇಓ ದೇವರಾಜ ಜೊತೆ ಚರ್ಚೆ ನೆಡಸುತ್ತಿದ್ದ ವೇಳೆ ಬಂದ ಗಿರಿಜಾನಾಥ ಮುಂಬಾಳೆ ಶಿವಕುಮಾರ್‌ರನ್ನು ಹೊರ ಕರೆದು ಹಲ್ಲೆ ಮಾಡಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಪರಸ್ಪರರೂ ಗಂಭೀರವಾಗಿ ಬಡಿದಾಡಿಕೊಂಡಿದ್ದಾರೆ. ಈ ಮಾರಾಮಾರಿಯಲ್ಲಿ ಶಿಕ್ಷಕ ಗಿರಿಜಾನಾಥ ಕೈ ಮುರಿದಿದ್ದು, ಶಿವಕುಮಾರ್ ತಲೆಗೆ ಗಂಭೀರ ಗಾಯವಾಗಿದೆ. ಗಾಯಾಳುಗಳು ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.