ಧಾರವಾಡ: ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡನೋರ್ವ ಯುವತಿ ಕಡೆಯವರಿಂದ ಏಟು ತಿಂದಿದ್ದಾನೆ. ಬಳಿಕ ಹಲ್ಲೆ ಮಾಡಿದವರ ವಿರುದ್ಧ ದೂರು ಕೊಡಲು ಹೋಗಿ ತಾನೇ ಪೊಲೀಸರ ಅತಿಥಿಯೂ ಆಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕಾಂಗ್ರೆಸ್ ಮುಖಂಡ ಮನೋಜ ಕರ್ಜಗಿ ಬಂಧಿತ ಆರೋಪಿ.
ಮನೋಜ್ ಕರ್ಜಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಆಗಿದ್ದ. ಈತ ಧಾರವಾಡದ ವಿದ್ಯಾಗಿರಿ ಬಡಾವಣೆಯಲ್ಲಿ ಲೇಮೋಸ್ ಯುನಿಸೆಕ್ಸ್ ಸಲೂನ್ ಆ್ಯಂಡ್ ಸ್ಪಾ ನಡೆಸುತ್ತಿದ್ದಾನೆ. ತನ್ನದೇ ಸ್ಪಾದಲ್ಲಿ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದ 19 ವರ್ಷದ ಬ್ಯೂಟಿಷಿಯನ್ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನನ್ವಯ ಮನೋಜ್ ಕರ್ಜಗಿಯನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ. ಇನ್ನು ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಯುವತಿ ಕಡೆಯವರ ಮೇಲೆ ಮನೋಜ್ ಪ್ರತಿದೂರು ನೀಡಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.