ಭಟ್ಕಳ: ಮಾನವರ ಸ್ವಯಂಕೃತ ಅಪರಾಧದಿಂದ ಇಂದು ಸಮುದ್ರ ಕಲುಷಿತಗೊಳ್ಳುತ್ತಿದೆ. ನಮ್ಮ ಅಪರಾಧದಿಂದ ಇಂದು ಜೀವಜಲಚರಗಳು ನಾಶವಾಗುವುದಲ್ಲದೇ, ಅದನ್ನು ತಿನ್ನುವ ನಮ್ಮ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.
ಅವರು ಮುರ್ಡೇಶ್ವರ ಕಡಲತೀರದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಡಲ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಡಲ ತೀರದಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಡಲಿಗೆ ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು. ಈ ಸ್ವಚ್ಛತೆ ಕಾರ್ಯಕ್ರಮ ಆಚರಣೆಗಷ್ಟೇ ಸೀಮಿತವಾಗದೆ ನಿರಂತರ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ ಬಿ. ಸುಮಂತ, ಕಾರವಾರ ಕೋಸ್ಟ್ ಗಾರ್ಡ್ ಕಮಾಂಡೆಂಟ್ ಹೆಚ್.ಟಿ.ಮಂಜುನಾಥ, ವಿಜ್ಞಾನಿ ಡಾ. ರಶೀದ್ತಾ, ಪಂ.ಇ.ಒ ಪ್ರಭಾಕರ್ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ ಸುರೇಶ, ಜಾಲಿ ಪ.ಪಂ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ ಇದ್ದರು.
ನಂತರ ನಡೆದ ಕಡಲತೀರ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸರ್ಕಾರಿ ಇಲಾಖೆ ಸಿಬ್ಬಂದಿ, ಜೆ.ಸಿ.ಐ, ಲಯನ್ಸ್ ಕ್ಲಬ್ ಸೇರಿದಂತೆ ಗ್ರಾ. ಪಂ ಸಿಬ್ಬಂದಿಗಳು, ಸ್ಥಳೀಯ ಸಂಘಸಂಸ್ಥೆ ಪದಾಧಿಕಾರಿಗಳು, ಎನ್.ಎಸ್.ಎಸ್, ಎನ್.ಸಿ.ಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುರ್ಡೇಶ್ವರ ಎರಡು ಬದಿಯ ಕಡಲ ತೀರವನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿ ಮಾಡಿದರು.