72 ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿಯವರಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ.!

ನವದೆಹಲಿ: 72 ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದ ಬರುತ್ತಿದೆ. ಜನಮೆಚ್ಚಿರುವ ನಾಯಕನಿಗೆ ಟ್ವೀಟ್ ಮೂಲಕ ಶುಭ ಹಾರೈಕೆ ಮಾಡಲಾಗ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸೃಜನಶೀಲತೆಯಿಂದ ನಡೆಸುತ್ತಿರುವ ರಾಷ್ಟ್ರ ನಿರ್ಮಾಣ ಅಭಿಯಾನವು ನಿಮ್ಮ ನಾಯಕತ್ವದಲ್ಲಿ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ನಾನು ಬಯಸುತ್ತೇನೆ ಎಂದು ರಾಷ್ಟ್ರಪತಿ ಮುರ್ಮು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಕೂಡ ಶುಭಾಶಯ ಕೋರಿದ್ದು, ʻಮೋದಿಯವರು ದೇಶವನ್ನು ಅದರ ಮೂಲ ಬೇರುಗಳಿಗೆ ಜೋಡಿಸುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯಲು ಶ್ರಮಿಸಿದ್ದಾರೆ. ಮೋದಿಜಿಯವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ ನವ ಭಾರತವು ವಿಶ್ವ ಶಕ್ತಿಯಾಗಿ ಹೊರಹೊಮ್ಮಿದೆ. ಮೋದಿ ಜಿ ಅವರು ಜಾಗತಿಕ ನಾಯಕರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಇಡೀ ವಿಶ್ವದಿಂದ ಗೌರವಿಸಲ್ಪಟ್ಟಿದ್ದಾರೆʼ ಎಂದು ಶಾ ಟ್ವೀಟ್ ಮಾಡಿದ್ದಾರೆ.

ಇನ್ನು ಕೇಂದ್ರ ಸಚಿವರು ಬಿಜೆಪಿ ಮುಖಂಡರು ವಿರೋಧ ಪಕ್ಷಗಳ ಮುಖಂಡರು ಸೇರಿದಂತೆ ಅನೇಕರು ಪ್ರಧಾನಿ ಮೋದಿಯವರಿಗೆ ಶುಭ ಕೋರಿದ್ದಾರೆ. ಮೋದಿ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.