ಬೆಂಗಳೂರು: ಯುದ್ಧ ಹಾಗೂ ಯುದ್ಧದ ಮಾದರಿ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ದೇಶದ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಗಾಗಿ ಹೋರಾಡುವ ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ಸೇವೆ ಸಲ್ಲಿಸುತ್ತಾರೆ. ಯುದ್ಧದಂತಹ ಕಾರ್ಯಚರಣೆಯಲ್ಲಿ ಪಾಲ್ಗೊಂಡು ವೀರ ಮರಣವನ್ನಪ್ಪಿದ ರಾಜ್ಯದ ಮೂಲ ನಿವಾಸಿ ಸೈನಿಕರ ಕುಟುಂಬ ಸದಸ್ಯರಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದಿಂದ ಅವರ ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಲು ಸರ್ಕಾರ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಇನ್ನೂ ಈಗಾಗಲೇ ಹುತಾತ್ಮ ವೀರ ಯೋಧರ ಅವಲಂಬಿತರಿಗೆ ಮಾಜಿ ಸೈನಿಕರ ಮೀಸಲಾತಿಯಡಿ ಎಲ್ಲಾ ವಿಭಾಗದ ಹುದ್ದೆಗಳಲ್ಲಿ 10 % ಮೀಸಲಾತಿಯನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಿ 400 ಹುತಾತ್ಮ ಯೋಧರ ಕುಟುಂಬಗಳಿವೆ. ಅವರಲ್ಲಿ ಸುಮಾರು 200 ಮಂದಿ ಅವಲಂಬಿತರು ಅನುಕಂಪದ ಮೇಲೆ ನೇಮಕಾತಿಗೆ ಅರ್ಹರಿದ್ದಾರೆ ಎಂದು ತಿಳಿಸಿದೆ.