ನವದೆಹಲಿ: ಮೋದಿ ಹುಟ್ಟುಹಬ್ಬದ ಪ್ರಯುಕ್ತ ಭಾರತಕ್ಕೆ ಬರಲು ಸಿದ್ದವಾಗಿರುವ 8 ಆಫ್ರಿಕನ್ ಚೀತಾಗಳಿಗಾಗಿ ವಿಶೇಷ ವಿಮಾನ ನಮೀಬಿಯಾ ರಾಜಧಾನಿಗೆ ತಲುಪಿದೆ. ಮೋದಿ ಅವರು ತಮ್ಮ ಜನ್ಮದಿನವಾದ ಸೆ. 17 ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಈ ಚೀತಾಗಳನ್ನು ಬಿಡಲಿದ್ದಾರೆ.
5 ಹೆಣ್ಣು ಮತ್ತು 3 ಗಂಡು ಚೀತಾಗಳು ಸೇರಿ ಒಟ್ಟು 8 ಚೀತಾಗಳನ್ನು ಸೆ. 17 ರಂದು ರಾಜಸ್ಥಾನದ ಜೈಪುರಕ್ಕೆ ತರಲಾಗುತ್ತಿದೆ. ವಿಶೇಷ ಅಂದ್ರೆ ಈ ಚೀತಾಗಳನ್ನ ಹೊತ್ತು ತರುತ್ತಿರುವ B747 ಜಂಬೋ ಜೆಟ್ ವಿಮಾನಕ್ಕೆ ವಿಶೇಷವಾಗಿ ಕಸ್ಟಮೈಸ್ ಮಾಡಿ ಹುಲಿ ಮುಖದ ರೀತಿಯಲ್ಲಿ ಪೇಂಟ್ ಮಾಡಲಾಗಿದೆ. ನಮೀಬಿಯಾ ರಾಜಧಾನಿಯಿಂದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲು ಈ ವಿಮಾನ ತೆರಳಿದೆ. ಚೀತಾಗಳನ್ನು ರಾಜಸ್ಥಾನದ ಜೈಪುರಕ್ಕೆ ತಂದು ನಂತರ ಹೆಲಿಕಾಪ್ಟರ್ ಮೂಲಕ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದ ಹೊಸ ಮನೆಗೆ ಕರೆದೊಯ್ಯಲಾಗುತ್ತದೆ.
ವಿಮಾನವು 16 ಗಂಟೆಗಳವರೆಗೆ ಹಾರುವ ಸಾಮರ್ಥ್ಯವಿರುವ ಅಲ್ಟ್ರಾ-ಲಾಂಗ್ ರೇಂಜ್ ಜೆಟ್ ಆಗಿದ್ದು, ಇಂಧನ ತುಂಬಲು ನಿಲುಗಡೆ ಇಲ್ಲದೆ ನೇರವಾಗಿ ನಮೀಬಿಯಾದಿಂದ ಭಾರತಕ್ಕೆ ಬರುವ ಸಾಮರ್ಥ್ಯ ಹೊಂದಿದೆ.