ಉತ್ತರ ಪ್ರದೇಶ: ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಲಖೀಂಪುರದಲ್ಲಿ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು ಸಂತ್ರಸ್ತೆಯರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಘಟನೆಯ ಸಂಬಂಧ ಅತ್ಯಾಚಾರ ಮತ್ತು ಕೊಲೆ ಪ್ರಕರಣದಡಿಯಲ್ಲಿ ನಾಲ್ವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮೃತದೇಹಗಳು ಪತ್ತೆಯಾಗುವ ಮೂರು ಗಂಟೆಗೂ ಮುನ್ನ ಮಕ್ಕಳಿಬ್ಬರನ್ನು ಅಪಹರಿಸಲಾಯಿತು. ಮೂವರು ಯುವಕರು ಬೈಕ್ನಲ್ಲಿ ಬಂದು ಮಕ್ಕಳನ್ನು ಬಲವಂತಾಗಿ ಕರೆದೊಯ್ದರು ಎಂದು ಸಂತ್ರಸ್ತೆಯರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ನಾಲ್ವರನ್ನು ಬಂಧನ ಮಾಡಲಾಗಿದ್ದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಯೋಗಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ತೀವ್ರ ವಾಗ್ದಾಳಿ
ಇನ್ನು ಈ ಬಗ್ಗೆ ಯೋಗಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಘೋರ ಅಪರಾಧಗಳು ಏಕೆ ಹೆಚ್ಚುತ್ತಿವೆ.? ಎಂದು ಪ್ರಶ್ನೆ ಮಾಡಿದ್ದಾರೆ.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಉತ್ತರ ಪ್ರದೇಶದಲ್ಲಿ ಅಪರಾಧಿಗಳಿಗೆ ಯಾವುದೇ ಭಯವಿಲ್ಲ. ಏಕೆಂದರೆ ಸರ್ಕಾರದ ಆದ್ಯತೆಗಳೇ ತಪ್ಪಾಗಿವೆ ಎಂದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ಬಗ್ಗೆ ರಾಜ್ಯ ಸರ್ಕಾರದ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಲಖಿಂಪುರ್ ಖೇರಿಯಲ್ಲಿ ನಡೆದ ಘಟನೆಯೇ ಬಹಿರಂಗಪಡಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಭಟನೆಯ ಚಿತ್ರಗಳನ್ನು ಟ್ವೀಟ್ ಮಾಡಿದ್ದು, ಒಪ್ಪಿಗೆಯಿಲ್ಲದೆ ಮತ್ತು ಕಾರ್ಯವಿಧಾನವನ್ನು ಉಲ್ಲಂಘಿಸುವ ಮೂಲಕ ಶವಪರೀಕ್ಷೆಯನ್ನು ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಖಿಲೇಶ್ ಆಗ್ರಹಿಸಿದ್ದಾರೆ