ಸೆರ್ಬಿಯ: ಭಾರತದ ಕುಸ್ತಿಪಟು ವಿನೇಶಾ ಫೋಗಾಟ್ ಬೆಲ್ಗ್ರೆಡ್ ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಎರಡು ಬಾರಿ ಚಾಂಪಿಯನ್‌ಷಿಪ್‌ನಲ್ಲಿ ಪದಕದ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ನಿರ್ಮಿಸಿದ್ದಾರೆ.
53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶಾ ಕಂಚಿನ ಪದಕದ ಬೌಟ್‌ನಲ್ಲಿ 8–0 ಯಿಂದ ಸ್ವೀಡನ್‌ನ ಜೊನ್ನಾ ಮಾಲ್‌ಮರ್ಗನ್ ಅವರನ್ನು ಪರಾಭವಗೊಳಿಸಿದರು. 28 ವರ್ಷದ ವಿನೇಶಾ 2019 ರಲ್ಲಿ ಕಜಕಿಸ್ತಾನದ ನೂರ್ ಸುಲ್ತಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಕಂಚನ್ನು ಗೆದ್ದಿದ್ದರು.
ಈ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ವಿನೇಶಾ ಮಂಗೋಲಿಯಾದ ಭಟ್ಕುಯಗ್ ಖುಲಾನ್ ಎದುರು ಸೋತಿದ್ದರು. ಆದರೆ ಖುಲಾನ್ ಫೈನಲ್ ತಲುಪಿದ್ದರಿಂದ ವಿನೇಶಾ ಅವರಿಗೆ ರಿಪೇಚ್ ಸುತ್ತಿನಲ್ಲಿ ಆಡುವ ಅವಕಾಶ ದೊರಕಿತ್ತು.
ರಿಪೇಚ್ನ ಮೊದಲ ಸುತ್ತಿನಲ್ಲಿ ಕಜಕಿಸ್ತಾನದ ಜುಲ್‌ದಿಜ್ ಎಶಿಮೊವಾ ಅವರನ್ನು ಸೋಲಿಸಿದ ವಿನೇಶಾ, ಬಳಿಕ ಅಜರ್‌ಬೈಜಾನ್‌ನ ಲೇಲಾ ಗುರ್ಬನೊವಾ ವಿರುದ್ಧ ಗೆದ್ದು ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದರು.