ಯಲ್ಲಾಪುರ: ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 44.52 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು. ಅವರು ಸಂಘದ ಎಪಿಎಂಸಿ ಶಾಖೆಯ ಆವಾರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಗತಿ ಕುರಿತು ಮಾಹಿತಿ ನೀಡಿದರು.
ಎಪಿಎಂಸಿ ಆವಾರದಲ್ಲಿ ಸಂಘದಿಂದ ಅಡಿಕೆ ದಲಾಲಿ ಆರಂಭಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಡಕೆ ದಾಸ್ತಾನಿಗೆ ಗೋಡೌನ್ ವ್ಯವಸ್ಥೆ, ಸಮರ್ಪಕ ತೂಕ, ಉತ್ತಮ ಬೆಲೆ ನೀಡಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಲ್ಲದೇ ಸಂಘದಿಂದ ರೈತರಿಗೆ ಅಡಿಕೆ ಸುಲಿಯುವ ಯಂತ್ರವನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಕೊಬ್ಬರಿ ಎಣ್ಣೆ ಹಾಗೂ ಹಿಟ್ಟಿನ ಗಿರಣಿ ಆರಂಭಿಸಲಾಗಿದೆ ಎಂದರು.
ಕಳಚೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ಹೆಬ್ಬಾರಕುಂಬ್ರಿ, ಯಲ್ಲಾಪುರ ಪಟ್ಟಣ ಹಾಗೂ ಎಪಿಎಂಸಿ ಆವಾರದಲ್ಲಿ ಶಾಖೆ ಹೊಂದಿದೆ. ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಪ್ರಧಾನ ಕಚೇರಿಯಲ್ಲಿ ಸೆ.19 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ಸಿ ಭಟ್ಟ, ನಿರ್ದೇಶಕರಾದ ರಾಘವೇಂದ್ರ ಭಟ್ಟ, ಸೀತಾ ಹೆಗಡೆ, ರಾಮಕೃಷ್ಣ ಹೆಗಡೆ, ಕಾಶಿನಾಥ ಕಳಸ, ಕುಪ್ಪ ಗೌಡ, ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಡಿ.ಎಂ ಹೆಗಡೆ ಹಾಗೂ ಇತರರಿದ್ದರು.