ಜಮ್ಮುಕಾಶ್ಮೀರ: ಮಿನಿ ಬಸ್ ಪ್ರಪಾತಕ್ಕೆ ಉರುಳಿದ ಭೀಕರ ದುರ್ಘಟನೆ ಪೂಂಚ್ ಜಿಲ್ಲೆಯ ಬರೇರಿ ನಲ್ಲಾದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಿನಿ ಬಸ್ಸು ಮಂಡಿಯಿಂದ ಸಾಜಿಯನ್ ಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದ್ದು, ಭಾರತೀಯ ಸೇನೆಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಗಾಯಗೊಂಡವರನ್ನು ತಕ್ಷಣ ಮಂಡಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಮಂಡಿ ತಹಶಿಲ್ದಾರ್ ಶೆಹ್ಜಾದ್ ಲತಿಫ್ ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಕಂಬನಿ ಮಿಡಿದಿದ್ದಾರೆ. ಅಲ್ಲದೇ ಜಮ್ಮು-ಕಾಶ್ಮೀರ ಗವರ್ನರ್ ಮನೋಜ್ ಸಿನ್ಹ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.