ಮುಂಡಗೋಡ: ರಕ್ತವನ್ನು ಕೃತಕವಾಗಿ ಯಾರೂ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೋಬ್ಬರೂ ರಕ್ತದಾನ ಮಾಡಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ವಾಲಿ ಮಂಗಳವಾರ ಹೇಳಿದರು. ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಪಟ್ಟಣದ ದೇಶಪಾಂಡೆ ರುಡ್‌ಸೆಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಮಾತನಾಡಿ ರಕ್ತದಾನ ಶ್ರೇಷ್ಠದಾನವಾಗಿದ್ದು ಜಗತ್ತಿನ ಅವಿಷ್ಕಾರ ಆಗದೇ ಇರುವಂತಹ ಅತ್ಯಮೂಲ್ಯವಾದ ವಸ್ತುಗಳಲ್ಲಿ ರಕ್ತವು ಒಂದು. ಇದನ್ನು ಮನುಷ್ಯನಲ್ಲದೆ ಬೇರೆ ಯಾರಿಂದಲೂ ಪಡೆಯಲು ಸಾಧ್ಯವಾಗುವುದಿಲ್ಲ. ರಕ್ತದಾನದ ಬಗ್ಗೆ ಇರುವ ಉಹಾಪೋಹಗಳನ್ನು ಬಿಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಸಿದ್ದರಾಗಬೇಕು ಎಂದರು.
ಅರಣ್ಯ ಇಲಾಖೆಯ 33 ಜನ ಸಿಬ್ಬಂದಿಗಳು ರಕ್ತದಾನ ಮಾಡಿದರು. ಈ ವೇಳೆ ಟಿಂಬರ ಡೀಪೋ ಎಸಿಎಫ್. ಅಶೋಕ ಹಪ್ಪಳದ, ಕಾತೂರ ಆರ್‌ಎಫ್‌ಒ ಮಂಜುನಾಥ ನಾಯ್ಕ, ಜಿ.ಟಿ.ರೇವಣಕರ, ರುಡ್ ಸೆಟಿ ಅಧಿಕಾರಿ ಮಹಾಬಲೇಶ್ವರ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಬೈಜು.ವಿ.ಜೆ ಇತರರಿದ್ದರು.