ಶಿರಸಿ: ಶಕ್ತಿ ದೇವತೆ, ನಗರದ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸೆ. 26 ರಿಂದ ಅ. 5 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಮಂಗಳವಾರ ಬಿಡುಗಡೆಗೊಳಿಸಿದ ಅಧ್ಯಕ್ಷ ಆರ್ ಜಿ ನಾಯ್ಕ ಮಾಹಿತಿ ನೀಡಿ, ನವರಾತ್ರಿ ಕಾರ್ಯಕ್ರಮಗಳನ್ನು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಮೂಲಕ ನಡೆಸಲಾಗುತ್ತಿದೆ. ಪ್ರತಿ ದಿನವೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಂಜೆ 7 ರಿಂದ ಕೀರ್ತನೆ ನಡೆಯಲಿದ್ದು, ಎಸ್. ಎಸ್ ಶಿವಾನಂದ ಸ್ವಾಮಿ, ಮಂಡ್ಯದ ಮಧುಸೂಧನ ದಾಸರು, ಉಳ್ಳಾಲದ ತೋನ್ಸೆ ಪುಷ್ಕಳಕುಮಾರ, ಸಕಲೇಶ ಪುರದ ಶೈಲಕುಮಾರ ದಾಸ್, ಉಂಚಳ್ಳಿ ಶಂಕರ ಭಟ್, ಶಿವಶಂಕರದಾಸರು ಈ ಕಾರ್ಯಕ್ರಮ ನಡೆಸಲಿಕೊಡಲಿದ್ದಾರೆ. ವಿಜಯ ದಶಮಿ ದಿನವಾದ ಅ. 5 ರಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನವರಾತ್ರಿ ಅಂಗವಾಗಿ ಆರತಿ ತಾಟಿನ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಹಳ್ಳಿ ಹಾಡು, ಭಾವಗೀತೆ ಸ್ಪರ್ಧೆ, ಧ್ಯಾನ ಮಾಲಿಕೆ, ಜಾನಪದ ಗುಂಪು ನೃತ್ಯ ಸ್ಪರ್ಧೆ, ರಂಗವಲ್ಲಿ ಸ್ಪರ್ಧೆ, ಶಾಸ್ತ್ರೀಯ ನೃತ್ಯ, ಕರಕುಶಲ ವಸ್ತುಗಳ ಪ್ರದರ್ಶನ, ಸಾಮಾನ್ಯ ಜ್ಞಾನ ಪರೀಕ್ಷೆ, ಚದುರಂಗ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ ನಡೆಯಲಿವೆ.
ಪಂದ್ಯಾಟಗಳ ಸ್ಪರ್ಧೆ ಸೆ. 22 ರಿಂದಲೇ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿವೆ. ಖೋಖೋ, ಕಬಡ್ಡಿ, ಪುರುಷರ ಮತ್ತು ಮಹಿಳೆಯರಿಗಾಗಿ ಹಗ್ಗ ಜಗ್ಗುವ ಸ್ಪರ್ಧೆ, ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ. 60 ವರ್ಷ ಮೇಲ್ಪಟ್ಟವರಿಗಾಗಿ ಓಟ, ಜಿಗಿತ ಸ್ಪರ್ಧೆ, ಗುಂಡು ಎಸೆತ ಮತ್ತು ನಡಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಸ್ಪರ್ಧಾ ವಿಜೇತರಿಗೆ ವಿಜಯ ದಶಮಿಯ ಮರುದಿವಸದಿಂದ ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಧರ್ಮದರ್ಶಿಗಳಾದ ಶಿವಾನಂದ ಶಿವನಂಚಿ, ವತ್ಸಲಾ ಹೆಗಡೆ ಇತರರಿದ್ದರು.